ADVERTISEMENT

ಚುರುಮುರಿ: ಕುರ್ಚಿ ಪಾಲಿಟ್ರಿಕ್ಸ್!

ಬಿ.ಆರ್.ಸುಬ್ರಹ್ಮಣ್ಯ
Published 11 ಡಿಸೆಂಬರ್ 2020, 19:30 IST
Last Updated 11 ಡಿಸೆಂಬರ್ 2020, 19:30 IST
Churumur12-12-2020
Churumur12-12-2020   

‘ವೈರಾಲಜಿ ಅಂದ್ರೇನಂತ ಗೊತ್ತೇನಲೇ?’ ಸುಮ್ಮನಿದ್ದ ರುದ್ರೇಶಿಯನ್ನು ಕೆಣಕುವಂತೆ ಕೇಳಿದ ಚಂಬಸ್ಯ.

‘ಗೊತ್ತಲೇ. ಅದು ವೈರಸ್‍ಗಳ ಬಗೆಗಿನ ಅಧ್ಯಯನ’ ರುದ್ರೇಶಿ ಅರುಹಿದ.

‘ದಡ್ಡ, ಅದ್ಹಂಗಲ್ಲಲೇ. ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ಯಾವತ್ತೂ ಅಂತರವಿರುವಂತೆ ರಾಜಕೀಯ ಕಾರ್ಯಸೂಚಿಗಳನ್ನು ರಚಿಸಿ ಪರಸ್ಪರ ವೈರತ್ವವನ್ನು ಹುಟ್ಟುಹಾಕುವುದೇ ವೈರಾಲಜಿ’ ಚಂಬಸ್ಯ ಹೊಸ ವಿವರಣೆ ನೀಡಿದ.

ADVERTISEMENT

‘ನೀನ್ಯಾಕೋ ಬ್ಯಾರೆ ರೂಟ್‍ನ್ಯಾಗ್ ಬರ್ತಾದಿಲೇ ಬಸ್ಸಿ. ಇತ್ತೀಚಿನ ವರ್ಷಗಳಲ್ಲಿ ಜಾತಿಗೊಂದು ಮಠ, ಜಾತಿಗೊಂದು ಸಭಾಭವನ, ಜಾತಿಗೊಂದು ನಿಗಮ– ಇದುನ್ನೆಲ್ಲ ನೋಡಿ ನಿನಿಗ್ಯಾಕೋ ಅಪ್‍ಸೆಟ್ ಆದಂಗೈತಿ’.

‘ಅಪ್‍ಸೆಟ್ ಆಗ್‍ಬೇಕಾದೋರೇ ಆಗದುಲ್ಲ, ನಾನ್ಯಾಕಲೇ ಆಗ್ತನಿ? ಜಾತಿಯಿಂದ ಜಾತಿಗಾಗಿ ಜಾತಿಯೇ ಆಡಳಿತ ನಡೆಸೋ ಜಾತಿಕೀಯನೇ ಟ್ರೆಂಡ್ ಆಗೇತಿ. ಅದಲ್ಲದೆ ಈ ರಾಜಕಾರಣಿಗಳ (ಸ್ವ)ಕಾರ್ಯದಾಗೆ ಪೀಠಾಧಿಪತಿಗಳು ಮೂಗು ತೂರಿಸೋ ಸ್ವಾಮಿ(ಜಿ)ಕಾರ್ಯ ಬೇರೆ ಎಗ್ಗಿಲ್ಲದಂಗೆ ನಡೆದೈತಿ. ಜತಿಗೇ ಕುರ್ಚಿಭದ್ರ ದುರಾಸಕ್ತಿಗಳ ಪಾಲಿಟ್ರಿಕ್ಸ್ ಜೋರಾಗೈತಿ. ಅದುಕ್ಕೇ ಹಂಗಂದೆ’.

‘ಕರೆಕ್ಟಾಗೇಳ್ದೆ ಬಸ್ಸಿ. ಇಪ್ಪಟ್ಟ್ ಪಿಎಚ್‍ಡಿ ಅಂದ್ರೇನಂತ ಯೇಳಪ್ಪಜ್ಜಿ’ ಈಗ ರುದ್ರೇಶಿ ಚಂಬಸ್ಯನನ್ನು ಕೆಣಕಿದ.

‘ಡಾಕ್ಟರ್ ಆಫ್ ಫಿಲಾಸಫಿ’.

‘ಅಲ್ಲ, ಅದು ಡಾಕ್ಟರ್ ಆಫ್ ಪಾಲಿಟ್ರಿಕ್ಸ್! ಬಹಳಷ್ಟು ಡಾಕ್ಟರೇಟ್‍ಗಳ ಹಿಂದೆ ರೇಟು, ರೆಕ್ಮಂಡೇಸನ್ನು ಮುಂತಾದ ಟ್ರಿಕ್ಕುಗಳು ಕೆಲಸ ಮಾಡ್ತವಲ್ಲ ಅದುಕ್ಕೆ’ ರುದ್ರೇಶಿ ಸಮರ್ಥಿಸಿದ.

‘ಇಪ್ಪಟ್ಟ್ ಕೊನಿಗೆ ನಂದ್ ಇನ್ನೊಂದೈತಿ. ಜೆನೆಟಿಕ್ಸ್ ಅಂದ್ರೇನಂತ ಹೇಳಪ್ಪ ನೋಡನ’ ಚಂಬಸ್ಯ ಮತ್ತೆ ಕೆಣಕಿದ.

‘ನೀನೇ ಹೇಳು’.

‘ಹುದ್ದೆಗಳಲ್ಲಿ, ಪೀಠಗಳಲ್ಲಿ ಮತ್ತು ನಾಯಕತ್ವ
ದಲ್ಲಿ ತಮ್ಮ ವಂಶದ ಕುಡಿಗಳನ್ನೇ ಅಧಿಕಾರಕ್ಕೆ ತರಬಕಂತ ಹವಣಿಕಿ ಮಾಡ್ತರಲ್ಲ ಅದೇ ಜೆನೆಟಿಕ್ಸ್’.

ಚಂಬಸ್ಯನ ಈ ವಿವರಣೆಯಿಂದ ಫುಲ್ ಖುಷ್ ಆದ ರುದ್ರೇಶಿ ‘ಇದುನ್ನ ಜೆನೆಟ್ರಿಕ್ಸ್ ಅಂತ ಕರೆದ್ರೆ ಯೆಂಗೆ?’ ಎಂದು ಕಿರುನಗೆ ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.