
‘ವೋಟ್ ಚೋರಿ ಅಂತ ಮಾತಾಡ್ತಾವ್ರಲ್ಲಾ... ಕಮಲದಲ್ಲಿ, ಕೈಪಕ್ಸದಲ್ಲಿ ಸೀಟು ಚೋರಿಯಾಗ್ಯದರ ಬಗ್ಗೆ ಹೈಕಮಾಂಡುಗಳು ಮಾತೇ ಆಡ್ತಿಲ್ಲವಂತೆ?’ ಅಂತು ಯಂಟಪ್ಪಣ್ಣ.
‘ಬುಡಣೈ, ಇಂಡಿ ಇಮಾನ ಟೇಮಿಗೆ ಕರೆಟ್ಟಾಗಿ ಹಾರದೆ ಟೈಮು ಚೋರಿ, ಕಾಸು ಚೋರಿ, ನಂಬಿಕೆ ಚೋರಿ ಅಗಿತ್ತಲ್ಲ ಅದುನ್ನ ಹೇಳಿ’ ತಿಪ್ಪಣ್ಣ ಕೇಳಿದ.
‘ಡೈವರುಗಳು ನಿದ್ದೆ ಮಾಡಕ್ಕೂ ಬುಡದೇ ಇಮಾನ ಓಡಿಸಿ ಅಂತ ರೋಸ್ತರಂತೆ. ಅವರು ತೂಕಡಿಸಿ ಇಮಾನ ಮುಗ್ಗುರಿಸಿದರೆ ಏನು ಮಾಡದು?’ ಅಂತ ತುರೇಮಣೆಗೆ ಕೇಳಿದೆ.
‘ಜನ ಇಮಾನ ನಿಲ್ದಾಣದೇಲಿ ಉಂಬಕ್ಕಿಲ್ಲದೆ, ಕುಡಿಯಕ್ಕೆ ನೀರಿಲ್ದೆ ನರಕ ಕಂಡ್ರೂವೆ ಸರ್ಕಾರ ಮಾತ್ರ ಊರಮ್ಯಾಲೆ ಊರು ಬಿದ್ರೂ ನನಗೇನು ಅಂತ ಸುಮ್ಮಗೆ ಕೂತುತ್ತಂತೆ? ಇಮಾನ ಹಾರದಿದ್ರೂ ಅರ್ಧ ದುಡ್ಡು ಮಾತ್ರ ವಾಪಾಸ್ ಕೊಟ್ಟವ್ರಂತೆ. ಅದ್ಯಾಕ್ಲಾ?’ ಯಂಟಪ್ಪಣ್ಣ ಆಶ್ಚರ್ಯದಲ್ಲಿತ್ತು.
‘ಇಮಾನದ ಟಿಕೆಟ್, ಆಸ್ಪತ್ರೆ ಬಿಲ್ಲು ಒಂದೇ ಕನಣೈ. ಬೇಕೋ ಬ್ಯಾಡವೋ ಇಸದ ಜ್ವರದಂಗೆ ಏರ್ತಾ ಇರತದೆ. ಇಮಾನದ ಚಾರ್ಜಿನ ಜೊತೆಗೆ ಸರ್ಕಾರದ ಟ್ಯಾಕ್ಸು, ಇಮಾನಕ್ಕೆ ಹುಯ್ಯೋ ಎಣ್ಣೆ, ನಾವು ತಕ್ಕೋಗೋ ಟ್ರಂಕು, ಬಟ್ಟೆ ಚೀಲದ ತೂಕ, ಇಮಾನ ನಿಲ್ದಾಣದ ಟ್ಯಾಕ್ಸು ಎಲ್ಲಾ ಸೇರಿಕ್ಯಂದರೆ ರೇಟು ನಮ್ಮ ಗ್ವಾಮಾಳೆಗಂಟಾ ಬತ್ತದೆ’ ತುರೇಮಣೆ ವಿವರಿಸಿದರು.
‘ಅಲ್ಲ ಕನ್ರೋ, ಬಸ್ಸು, ಟ್ರೈನು ಚಾರ್ಜು ಪಿಕ್ಸ್ ಮಾಡ್ಯವುರಲ್ಲಾ, ಹಂಗೆ ಇಮಾನದ ಚಾರ್ಜುನೂ ಪಿಕ್ಸ್ ಮಾಡಕ್ಕೆ ಸರ್ಕಾರಕ್ಕೇನು ಮಲ್ಲಾಗರು ಬಂದದೆ?’ ಯಂಟಪ್ಪಣ್ಣ ವಿಚಾರಿಸಿತು.
‘ದಿಟ ಕನಣೈ. ಸರ್ಕಾರ ಇಮಾನದ ಟಿಕೆಟ್ ರೇಟ್ನೂ ಬಸ್ಸಿನ ರೇಟು ಥರವೇ ಪಿಕ್ಸ್ ಮಾಡಿಬುಟ್ಟು ಸಸ್ತಾ ವಾಯುಶಕ್ತಿ ಗ್ಯಾರೆಂಟಿ ಯೋಜನೆ ಕೊಟ್ರೆ ದೇಸದ ಹೆಣ್ಣಾಳು, ಗಂಡಾಳುಗಳ ವೋಟೆಲ್ಲಾ ಕಮಲ ಪಕ್ಸಕ್ಕೇ ಸಿಕ್ತದೆ’. ಇವರೆಲ್ಲ ನಕ್ಕರೂ ಕೂಡ ನನ್ನ ಘನವಾದ ಅಲೋಚನೆ ಮೋದಿ ಮಾವಾರಿಗೆ ಮಾತ್ರ ಅರ್ಥವಾತದೆ ಕಂಡ್ರೀ.