
ಚುರುಮುರಿ: ಮನಸ್ಸಲ್ಲೇನಿದೆ?
‘ಡಿಸಿಎಂ ಡಿಕೆಶಿ ಸಾಹೇಬ್ರು ಮೊನ್ನೆ ಸಿಎಂ ಸಾಹೇಬ್ರಿಗೆ ನಗ್ತಾ ನಗ್ತಾ ಕೇಕ್ ತಿನ್ನಿಸಿದ್ರಂತಪ... ಅವರ ಮನಸಲ್ಲಿ ಏನಿತ್ತೋ...’ ಹರಟೆಕಟ್ಟೆಯಲ್ಲಿ ದುಬ್ಬೀರ ಒಳ ಮನಸ್ಸಿನ ವಿಷಯ ಪ್ರಸ್ತಾಪಿಸಿದ.
‘ಇನ್ನೇನಿರುತ್ತೆ? ದಾಖಲೆ ಮಾಡಿದ್ದಾತು, ಇನ್ನಾದ್ರೂ ಕುರ್ಚಿ ಬಿಟ್ಟು ಕೊಡಿ ಅಂತ ಕೇಕ್ ತಿನ್ನಿಸಿರಬೇಕು... ಮುಖ ನೋಡಿದ್ರೆ ಮನಸ್ಸಲ್ಲಿ ಏನಿದೆ ಅಂತ ಗೊತ್ತಾಗಲ್ವಾ?’ ಗುಡ್ಡೆ ಮಾರ್ಮಿಕವಾಗಿ ನಕ್ಕ.
‘ಮುಖ ನೋಡಿದ್ರೆ ಮನಸ್ಸಲ್ಲಿರೋದು ಗೊತ್ತಾಗುತ್ತಾ? ನಿನ್ತೆಲಿ... ಈಗ ಟ್ರಂಪ್ ದಿನಕ್ಕೊಂತರಾ ಮುಖ ಮಾಡ್ತಾರೆ, ಅವರ ಮನಸ್ಸಲ್ಲಿ ಏನಿದೆ ಹೇಳ್ತೀಯ?’ ಗುಡ್ಡೆ ಸವಾಲು ಹಾಕಿದ.
‘ನೊಬೆಲ್ ಶಾಂತಿ ಪ್ರಶಸ್ತಿ ಒಂದೇ ಅವರ ಮುಖ, ಮನಸ್ಸಲ್ಲಿರೋದು... ಸರಿನಾ?’
‘ನೊಬೆಲ್ ಅಶಾಂತಿ ಪ್ರಶಸ್ತಿ ಅಂತ ಏನರೆ ಇದ್ರೆ ಅವರಿಗೆ ಕೊಡಬೋದು ನೋಡು...’ ಮಂಜಮ್ಮ ನಕ್ಕಳು.
‘ಈಗ ನಾಯಿಗಳು ಯಾವಾಗ ಕಚ್ತಾವೆ ಹೇಳಕ್ಕೆ ಬರಲ್ಲ ಅಂತ ಕೋರ್ಟ್ ಹೇಳಿದೆ, ನೀನು ನಾಯಿಗಳ ಮುಖ ನೋಡಿ ಯಾವ ನಾಯಿ ಕಚ್ಚುತ್ತೆ, ಯಾವುದು ಕಚ್ಚಲ್ಲ ಹೇಳ್ತೀಯ?’
‘ಅದು ಕಷ್ಟ...’ ಎಂದ ತೆಪರೇಸಿ.
‘ಹೋಗ್ಲಿ, ಕೈ ಕಮಾಂಡು ಡಿಕೆಶಿ ಸಾಹೇಬ್ರನ್ನ ಅಸ್ಸಾಂ ಚುನಾವಣೆಗೆ ಉಸ್ತುವಾರಿ ಮಾಡಿದೆ, ಅದರ ಮನಸ್ಸಲ್ಲೇನಿದೆ ಹೇಳು ನೋಡಾಣ...’
‘ಕರ್ನಾಟಕದ ಕುರ್ಚಿ ಕದನಕ್ಕೆ ವಿರಾಮ ಹಾಕೋ ಪ್ಲಾನು ಅನ್ಸುತ್ತೆ...’
‘ಸರಿ, ನಮ್ ಕುಮಾರಣ್ಣ ನಂದೂ ಗಣಿ ರೆಡ್ಡಿ ಗಲಾಟೆ ಹಳೆ ಕಥೆ ಅಂದ್ರಂತಲ್ಲ, ಅವರ ಮನಸ್ಸಲ್ಲಿ ಏನಿರಬಹುದು?’
‘ಹೊಸ ಕತೆ ಶುರು ಮಾಡೋ ಪ್ಲಾನ್ ಇರಬಹುದು...’
‘ಈಗ ಅದೆಲ್ಲ ಬೇಡ, ನಮ್ ಸಿದ್ರಾಮಣ್ಣ ಒಂದ್ಸಲ ನಾನೇ ಐದು ವರ್ಷ ಸಿಎಂ ಅಂತಾರೆ, ಇನ್ನೊಂದ್ಸಲ ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಾರೆ, ಮೊನ್ನೆ ‘ಎಷ್ಟು ದಿನ ಇರ್ತೀನೋ ಗೊತ್ತಿಲ್ಲ’ ಅಂದ್ರು... ಅವರ ಮನಸ್ಸಲ್ಲಿ ನಿಜವಾಗ್ಲೂ ಏನಿದೆ ಹೇಳ್ತೀಯ?’ ಮಂಜಮ್ಮ ಕೇಳಿದಳು.
‘ದೇವ್ರಾಣೆ ಗೊತ್ತಿಲ್ಲ, ನಾ ಸೋತೆ’ ಎಂದ ತೆಪರೇಸಿ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.