ADVERTISEMENT

ಚುರುಮುರಿ: ವೋಟ್ ಫ್ರಂ ಹೋಂ

ಚುರುಮುರಿ

ಮಣ್ಣೆ ರಾಜು
Published 16 ಏಪ್ರಿಲ್ 2024, 19:37 IST
Last Updated 16 ಏಪ್ರಿಲ್ 2024, 19:37 IST
<div class="paragraphs"><p>ಚುರುಮುರಿ: ವೋಟ್ ಫ್ರಂ ಹೋಂ</p></div>

ಚುರುಮುರಿ: ವೋಟ್ ಫ್ರಂ ಹೋಂ

   

ಮತಪೆಟ್ಟಿಗೆಯೊಂದಿಗೆ ಚುನಾವಣಾಧಿಕಾರಿಗಳು ಶಂಕ್ರಿ ಮನೆಗೆ ಬಂದರು.

‘ನನ್ನ ತಾಯಿ 90 ವರ್ಷ ಮೀರಿ ಸೆಂಚುರಿ ಸಮೀಪವಿದ್ದಾರೆ, ಇವರು ಮನೆಯಲ್ಲೇ ವೋಟ್ ಮಾಡ್ತಾರೆ’ ಅಂದ ಶಂಕ್ರಿ.

ADVERTISEMENT

ಸಿಟ್ಟಿಗೆದ್ದ ಅಜ್ಜಿ, ‘ನಾನು ವೋಟ್ ಹಾಕಲ್ಲ...’ ಅಂದಿತು.

‘ಅಜ್ಜಿಗೆ ಮತದಾನದ ಮಹತ್ವ ಗೊತ್ತಿಲ್ಲ ಅಂತ ಕಾಣುತ್ತೆ’ ಅಂದರು ಅಧಿಕಾರಿ.

‘ಆಫೀಸರಪ್ಪಾ, ನೀನು ಹುಟ್ಟುವ ಮೊದಲಿಂದಲೂ ನಾನು ಎಲ್ಲ ಚುನಾವಣೆಗಳಲ್ಲೂ ವೋಟ್ ಹಾಕಿದ್ದೇನೆ. ಈ ಬಾರಿಯೂ ಮತಕೇಂದ್ರಕ್ಕೇ ಹೋಗಿ ವೋಟ್ ಮಾಡ್ತೀನಿ’ ಎಂದಿತು ಅಜ್ಜಿ.

‘ವೆರಿಗುಡ್ ಅಜ್ಜಿ, ನಿಮಗೆ ವೆಹಿಕಲ್ ವ್ಯವಸ್ಥೆ ಮಾಡಬೇಕಾ?’

‘ಬೇಡ, ಕೋಲು ಊರಿಕೊಂಡು ಹೋಗಿ ವೋಟ್ ಹಾಕ್ತೀನಿ’.

‘ನನಗೆ ಮಂಡಿ ನೋವು, ಮತಕೇಂದ್ರಕ್ಕೆ ಹೋಗೋದು ಕಷ್ಟ. ನಾನು ಮನೆಯಲ್ಲೇ ವೋಟ್ ಮಾಡಬಹುದೇ?’ ಸುಮಿ ಕೇಳಿದಳು.

‘ಸಾರಿ ಮೇಡಂ, ಮಂಡಿ ನೋವು, ಸೊಂಟ ನೋವಿಗೆ ವೋಟಿಂಗ್ ಆಫರ್ ಇಲ್ಲ. ದಯವಿಟ್ಟು ಮತಕೇಂದ್ರಕ್ಕೆ ಹೋಗಿ ಮತ ಚಲಾಯಿಸಿ’.

‘ಪೋಲಿಂಗ್ ಬೂತ್‍ನಲ್ಲಿ ದೊಡ್ಡ ಕ್ಯೂ ಇರುತ್ತೆ, ಉರಿಬಿಸಿಲಿನಲ್ಲಿ ಕ್ಯೂ ನಿಂತು ವೋಟ್ ಮಾಡೋದು ಕಿರಿಕಿರಿ. ಮನೆಯಲ್ಲಿ ವೋಟ್ ಮಾಡಲು ನನಗೆ ಅವಕಾಶ ಮಾಡಿಕೊಡಿ’ ಮಗಳು ಪಮ್ಮಿ ಕೇಳಿಕೊಂಡಳು.

ಬಂದ ಸಿಟ್ಟು ತೋರಿಸಿಕೊಳ್ಳದ ಅಧಿಕಾರಿ, ‘ದೇಶದ ಭವಿಷ್ಯ ನಿರ್ಧರಿಸುವ ನಿಮ್ಮಂಥಾ ಯುವ ಮತದಾರರು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಮಳೆ, ಬಿಸಿಲಿನ ನೆಪ ಹೇಳಬಾರದು’ ಎಂದರು.

‘ಆನ್‍ಲೈನ್ ವೋಟಿಂಗ್ ವ್ಯವಸ್ಥೆ ಮಾಡಿ ವೋಟ್ ಫ್ರಂ ಹೋಂ ಅವಕಾಶ ಮಾಡಿಕೊಡಬೇಕು’ ಅಂದಳು ಪಮ್ಮಿ.

‘ಪೋಲಿಂಗ್ ಪರ್ಸೆಂಟೇಜ್ ಹೀಗೇ ಕಮ್ಮಿ ಆಗ್ತಿದ್ರೆ, ವೋಟ್ ಮಾಡದವರಿಗೆ ಸರ್ಕಾರಿ ಸೌಲಭ್ಯ ಕಟ್ ಮಾಡುವ ಕ್ರಮ ಕೈಗೊಳ್ಳಬೇಕು’ ಶಂಕ್ರಿ ರೇಗಿದ.

ಅಧಿಕಾರಿಗಳು ಮತಪೆಟ್ಟಿಗೆ ಎತ್ತಿಕೊಂಡು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.