
‘ನನಗರೆ ಇವೇ ಇವೇ ಘೋಷಣೆ ಕೇಳಿ ವಾಕರಿಕೆ ಬಂದೈತಿ. ‘ನವೆಂಬರ್ ಕ್ರಾಂತಿ’, ‘ಹೈಕಮಾಂಡ್ ಅಣತಿಯಂತೆ ನಡೀತಿವಿ’, ‘ಮಾತಿನ ಶಕ್ತಿ’, ‘ಕೊಟ್ಟ ವಚನವೇ ದೇವರು’, ‘ಬ್ರೇಕ್‌ಫಾಸ್ಟ್ ಕದನ ವಿರಾಮ’… ಅಯ್ಯಯ್ಯೋ… ಒಂದೇ ಎರಡೇ…’ ಬೆಕ್ಕಣ್ಣ ಬಲು ಬೇಸರದಿಂದ ಛೀಛೀ ಎಂದಿತು.
‘ಸಿಎಂ ಕುರ್ಚಿಗೆ ಟುವಾಲು ಹಾಕದನೂ ಬಿಡಂಗಿಲ್ಲ, ಹೈಕಮಾಂಡ್ ಅಪ್ಪಣೆಯೇ ದೇವರಪ್ಪಣೆ ಅನ್ನೂದನೂ ಬಿಡಂಗಿಲ್ಲ. ಸಿಎಂ ಕುರ್ಚಿ ತಮ್ಮ ಸಮುದಾಯದ ಸೊತ್ತು ಅಂತ ಹತ್ತಾರು ಕಾವಿಧಾರಿಗಳ ಘೋಷಣೆ ಬೇರೆ’ ಎಂದು ನಾನೂ ಛೀಗುಟ್ಟಿದೆ.
‘ಜಪಾನಿನೊಳಗೆ ಒಬ್ಬಾಕಿ ಒಂದ್ ಹುಡುಗನ್ನ ಮೂರು ವರ್ಷದಿಂದ ಪ್ರೀತಿ ಮಾಡತಿದ್ದಳಂತೆ. ಅಂವಾ ಕೈಕೊಟ್ಟನಂತ. ಭಾಳ ಬೇಜಾರಾಗಿ ಆಕಿ ಚಾಟ್ ಜಿಪಿಟಿ ಬಳಸಿಕೊಂಡು ಎಐ ಸಂಗಾತಿ ಸೃಷ್ಟಿ ಮಾಡಿ, ಗಾಂಧರ್ವ ವಿವಾಹವಾದಳಂತೆ’. ಬೆಕ್ಕಣ್ಣ ಸುದ್ದಿ ಓದಿತು.
‘ಅದಕ್ಕೆ ಮತ್ತ ಇಲ್ಲಿಯ ಕುರ್ಚಿ ಕದನಕ್ಕೆ ಏನು ಸಂಬಂಧ ಐತಲೇ?’ ನಾನು ಕುತೂಹಲದಿಂದ ಕೇಳಿದೆ.
‘ಈಗ ಸಿಎಂ ಕುರ್ಚಿ ಕೈತಪ್ಪಿದೋರು, ಸಿಎಂ ಕುರ್ಚಿ ಕನಸು ಕಾಣೋರು ಎಲ್ಲರೂ ಹಿಂಗ ಚಾಟ್ ಜಿಪಿಟಿ ಬಳಸಿಕೊಂಡು ತಮ್ಮ ಸೈಜಿನ ಎಐ ಸಿಎಂ ಕುರ್ಚಿ ಸೃಷ್ಟಿ ಮಾಡಿ, ಗಾಂಧರ್ವ ಪಟ್ಟಾಭಿಷೇಕ ಮಾಡಿಕೊಂಡರೆ ಹೆಂಗೆ?’ ಬೆಕ್ಕಣ್ಣ ಪ್ರಶ್ನೆ ಮುಂದಿಟ್ಟಿತು.
‘ಎಷ್ಟೋ ಮಂತ್ರಿಗಳು, ಶಾಸಕರು ಈ ಎಐಗಿಐ ಬರೋದಕ್ಕಿಂತ ಮೊದಲೇ ಸಿಎಂ ಕುರ್ಚಿಯ ಜೊತೆ ಗಾಂಧರ್ವ ಪಟ್ಟಾಭಿಷೇಕ ಮಾಡಿಕೊಂಡಾರೆ! ಎಷ್ಟು ವರ್ಷ ಅಂತ ಗಾಂಧರ್ವ ಪಟ್ಟಾಭಿಷೇಕದಲ್ಲೇ ಇರಬಕು, ನನಗೀಗ ಖರೇ ಖರೇ ಪಟ್ಟಾಭಿಷೇಕ ಮಾಡ್ರಿ ಅಂತ ಡಿಕೇಶಂಕಲ್ಲು ಪಟ್ಟು ಹಿಡಿದಾರೆ’ ಎಂದೆ.
‘ಅದೂ ಖರೇನೆ. ಇವರಷ್ಟೇ ಅಲ್ಲ, ಮಹಾಘಟಬಂಧನ ಪಕ್ಷದ ನಾಯಕಮಣಿಗಳೂ ಪ್ರತಿಯೊಂದು ಲೋಕಸಭಾ ಚುನಾವಣೆಗೂ ಮೊದಲು ಗಾಂಧರ್ವ ಪಟ್ಟಾಭಿಷೇಕ ಮಾಡಿಕೊಳ್ತಾರೆ!’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.