
‘ನಾಳೆ ನಮ್ಮ ಆಪ್ತ ನಾಯಕರನ್ನೆಲ್ಲ ಡಿನ್ನರ್‌ಗೆ ಕರೆದಿದ್ದೇನೆ, ಯಾವುದೇ ತೊಂದರೆ ಆಗದಂಗೆ ನೋಡ್ಕೊ’ ಎಮ್ಮೆಲ್ಲೆ ವಿಜಿ, ಪಿಎ ಮುದ್ದಣ್ಣನಿಗೆ ಹೇಳಿದ.
‘ಏನ್ ವಿಶೇಷ ಸರ್’ ಕುತೂಹಲದಿಂದ ಕೇಳಿದ ಮುದ್ದಣ್ಣ.
‘ಏನಿಲ್ಲ, ಸುಮ್ಮನೆ ಹೊಸ ವರ್ಷಕ್ಕೆ ಸೇರೋಣ ಅಂತ’.
‘ಹೊಸ ವರ್ಷ ಬಂದು ಒಂದು ವಾರ ಆಯ್ತು, ಈಗ ಪಾರ್ಟಿ ಯಾಕೆ ಸರ್?’
‘ಹೇಳಿದಷ್ಟು ಮಾಡು, ಔತಣಕೂಟದ ಬಗ್ಗೆ ನಿನಗ್ಯಾಕಿಷ್ಟು ಆಸಕ್ತಿ?’ ಸಿಟ್ಟಿನಲ್ಲಿ ಹೇಳಿದ ವಿಜಿ.
‘ನನಗಲ್ಲ ಸರ್, ಮಾಧ್ಯಮದವರಿಗೆ ಆಸಕ್ತಿ, ಏನೇನೋ ಸುದ್ದಿ ಬರ್ತಿದೆ ನಿಮ್ಮ ಔತಣಕೂಟದ ಬಗ್ಗೆ’.
‘ಏನೇನು ಬರ್ತಿದೆ?’
‘ಪಾರ್ಟಿಗೆ ಎಲ್ಲರನ್ನೂ ಕರೀಬೇಕು, ಆದರೆ, ಕೆಲವೇ ಕೆಲವರನ್ನ ಮಾತ್ರ ಯಾಕೆ ಕರೀತಿದಾರೆ, ಅದರಲ್ಲೂ ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಆಹ್ವಾನ ಏಕೆ ಅಂತೆಲ್ಲ ಕೇಳ್ತಿದ್ದಾರೆ. ಅಲ್ಲದೆ, ಇದೆಲ್ಲ ರಾಜಕಾರಣ ಅಂತ ಹೇಳ್ತಿದ್ದಾರೆ ಸರ್’.
‘ರಾಜಕಾರಣಿಗಳೆಲ್ಲ ಒಂದ್ಕಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಮಾತನಾಡದೇ ಇರೋಕಾಗುತ್ತಾ?’ ಎಮ್ಮೆಲ್ಲೆಗೆ ಮತ್ತೆ ಸಿಟ್ಟು ಬಂತು.
‘ಆದರೂ ಒಬ್ಬರಾದ ಮೇಲೆ ಒಬ್ಬೊಬ್ಬ ನಾಯಕರು ಔತಣಕೂಟ ಮಾಡ್ತಿರೋದೇಕೆ ಅಂತ’.
‘ಇದೊಳ್ಳೆ ಆಯ್ತಲ್ಲ, ರಾಜಕಾರಣಿಗಳಾದರೆ ನಾವು ಊಟ–ತಿಂಡಿಗೂ ಜೊತೆಗೆ ಸೇರಬಾರದಾ?’
‘ಸೇರಬಹುದು ಸರ್, ಆದರೆ ಸೇರುತ್ತಿರುವ ಟೈಮ್ ಬಗ್ಗೆ ಮಾಧ್ಯಮದವರ ತಕರಾರು’.
‘ಮಾಧ್ಯಮದವರ ತಕರಾರು ತಾನೆ, ಜನ ಏನೂ ಕೇಳ್ತಿಲ್ಲವಲ್ಲ’.
‘ಆದರೂ, ಇತರ ಎಮ್ಮೆಲ್ಲೆಗಳಲ್ಲಿ ಅಸಮಾಧಾನ ಇದೆ ಸರ್’.
‘ಯಾಕ್ ಅಸಮಾಧಾನ?’
‘ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್‌ಗೆ ಕರೆಯು
ತ್ತಿರುವ ನಾಯಕರು ಆಯ್ದ ಎಮ್ಮೆಲ್ಲೆಗಳಿಗೆ ಮಾತ್ರ ಆಹ್ವಾನ ನೀಡ್ತಿದ್ದಾರೆ ಅನ್ನೋದು’ ನಕ್ಕ ಮುದ್ದಣ್ಣ.
‘ಎಲ್ಲರೂ, ಎಲ್ಲರನ್ನ ಕರೆದರೆ ಹೈಕಮಾಂಡ್‌ಗೆ ಹೇಗೆ ಗೊತ್ತಾಗಬೇಕು ಯಾರ ಪವರ್, ಎಷ್ಟು ಅಂತ’ ನಿಗೂಢವಾಗಿ ನಕ್ಕ ಎಮ್ಮೆಲ್ಲೆ ವಿಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.