ADVERTISEMENT

ಚುರುಮುರಿ | ಹೆಗ್ಗಣಗಳ ರಾಜ್ಯದಲ್ಲಿ

ಸುಮಂಗಲಾ
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
.
.   

ಬೆಕ್ಕಣ್ಣ ಪೇಪರು ಓದುತ್ತ ಪಕಪಕನೆ ನಗುತ್ತಿತ್ತು.

‘ಹಿಂತಾಪರಿ ಎದಕ್ಕೆ ನಗಾಕೆ ಹತ್ತೀ?’ ನಾನು ಅಚ್ಚರಿಯಿಂದ ಕೇಳಿದೆ.

ಪ್ರಜಾವಾಣಿಯಲ್ಲಿ ‘ಬೇಕಾಗಿದ್ದಾನೆ ಕಿಂದರಿಜೋಗಿ’ ಅಂತ ಐವತ್ತು ವರ್ಷಗಳ ಹಿಂದಿನ ಸುದ್ದಿಯನ್ನು ಬೆಕ್ಕಣ್ಣ ತೋರಿಸಿತು.

ADVERTISEMENT

‘ಒಂದು ಜೋಡಿ ಹೆಗ್ಗಣಗಳ ಸಂತಾನ ಮೂರು ವರ್ಷದಲ್ಲಿ 35 ಕೋಟಿ ಆಗುವುದೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಕಟಣೆಯೊಂದು ತಿಳಿಸುತ್ತದೆ’ ಎನ್ನುವುದು ಸುದ್ದಿಯ ಸಾರವಾಗಿತ್ತು.

‘ಒಂದು ಜೋಡಿ ಹೆಗ್ಗಣದಿಂದ 35 ಕೋಟಿ ಹೆಗ್ಗಣಗಳ ಸಂತಾನ ಆಗೂದು ಉತ್ಪ್ರೇಕ್ಷೆ ಅನ್ನಿಸಿ ದರೂ, ಲಕ್ಷಗಟ್ಟಲೆ ಆಗೂದಂತೂ ಹೌದು’ ಎಂದೆ.

‘ಆತಪಾ… ಹಂಗೇ ಅಂದ್ಕಳಣ. ಈ ಐವತ್ತು ವರ್ಸಕ್ಕೆ ಎಷ್ಟಾಗಿರಬೌದು ಹೇಳು’ ಎಂದು ಮರುಪ್ರಶ್ನಿಸಿತು.

ಹೆಗ್ಗಣಗಳು ಪ್ರತಿ ಮೂರು ತಿಂಗಳಿಗೆ ಸುಮಾರು 8-10 ಮರಿ ಹಾಕುತ್ತವೆ, ಇವುಗಳಲ್ಲಿ ಅರ್ಧದಷ್ಟು ಹೆಣ್ಣು ಅಂದ್ಕಳಣ, ಪ್ರತಿ ಮರಿಯೂ ಮೂರೇ ತಿಂಗಳಲ್ಲಿ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತೆ. ಅಂದ್ರೆ ಘಾತೀಯ ಬೆಳವಣಿಗೆ, ಎಕ್ಸ್‌ಪೊನೆನ್ಷಿಯಲ್‌ ಗ್ರೋತ್. ಅರ್ಧದಷ್ಟು ಮಾತ್ರ ಬದುಕುಳೀತಾವೆ, ಒಂದೂವರೆ-ಎರಡು ವರ್ಷ ಇವುಗಳ ಆಯುಷ್ಯ… ನಾನು ತಲೆ ಕೆರೆದುಕೊಂಡೆ.

ಬೆಕ್ಕಣ್ಣ ಚಾಟ್‌ಜಿಪಿಟಿಗೆ ಕೇಳಿತು. ಚಾಟ್‌ಜಿಪಿಟಿ ಅದೇನೋ ಪೈಥಾನ್‌ ಸ್ಕ್ರಿಪ್ಟ್‌ ಹಾಕಿ ತಟ್ಟನೆ ಉತ್ತರಿಸಿತು ‘50 ವರ್ಷದ ಹಿಂದಿದ್ದ ಒಂದು ಹೆಗ್ಗಣ ದಂಪತಿಯಿಂದ 13ರ ಮುಂದೆ 48 ಸೊನ್ನೆ ಹಾಕಿದ್ರೆ ಎಷ್ಟಾಗುತ್ತೆ ಅಷ್ಟು ಹೆಗ್ಗಣಗಳು ಹುಟ್ಟಿರತಾವೆ’.

ರಾತ್ರಿ ಬೆಂಗಳೂರಿನ ರಸ್ತೆಗಳಲ್ಲಿ ಕೋಟ್ಯಂತರ ಹೆಗ್ಗಣಗಳೇ ಓಡಾಡುವುದನ್ನು ಚಿತ್ರಿಸಿಕೊಂಡು ನನ್ನ ಮೈನಡುಗಿತು.

‘ಬೀದಿ ಬೆಕ್ಕುಗಳ ಸಂತಾನೋತ್ಪತ್ತಿ ಹೆಚ್ಚಿಸೋದಕ್ಕೆ ಸರ್ಕಾರ ಕ್ರಮ ತಗಂಡು, ಛಲೋತ್ನಾಗಿ ಸಾಕಿ, ಹೆಗ್ಗಣ ಹಿಡಿಯೋ ಡ್ಯೂಟಿ ವಹಿಸಬೇಕು’ ಎಂದೆ.

‘ನಾವು ಬೆಕ್ಕುಗಳು ಡ್ಯೂಟಿ ಮಾಡತೀವಿ, ಬಿಡು. ಆದರೆ ಈ ಐವತ್ತು ವರ್ಸದಲ್ಲಿ ಎರಡೇ ಕಾಲಿನ ಹೆಗ್ಗಣಗಳ ಸಂಖ್ಯೆ ಸರ್ಕಾರದ ಎಲ್ಲಾ ಇಲಾಖೆವಳಗೆ ಎಕ್ಸ್‌ಪೊನೆನ್ಷಿಯಲ್‌ ಆಗಿ ಹೆಚ್ಚೈತಲ್ಲ… ಅವರನ್ನು ಹಿಡಿಯೋರು ಯಾರು?’ ಎಂದು ಬೆಕ್ಕಣ್ಣ ಮರುಪ್ರಶ್ನಿಸಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.