ADVERTISEMENT

ಚುರುಮುರಿ | ಯಾರಿಗೆ ಯಾರುಂಟು...

ಮಣ್ಣೆ ರಾಜು
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
.
.   

ಮನೆ ಮುಂದಿನ ಮರದ ನೆರಳಿನಲ್ಲಿ ತಿಮ್ಮಜ್ಜ ಕುಳಿತಿದ್ದರು. ಪಕ್ಕದಲ್ಲಿ ಅವರ ನಾಯಿ ಮಲಗಿತ್ತು.

‘ತಿಮ್ಮಜ್ಜ, ಚೆನ್ನಾಗಿದ್ದೀರಾ?’ ಎಂದೆ. ಎಚ್ಚರಗೊಂಡ ನಾಯಿ ‘ಗುರ್’ ಎಂದಿತು.

‌‘ಹೆದರಬೇಡಿ, ನನಗೆ ಏನಾದರೂ ಮಾಡಿಬಿಡ್ತೀರಿ ಅಂತ ನಾಯಿ ಹೆದರಿಸಿದೆ ಅಷ್ಟೇ’ ಅಂದ್ರು ತಿಮ್ಮಜ್ಜ.

ADVERTISEMENT

‘ನಿಮ್ಮ ಮಕ್ಕಳು ಏನು ಮಾಡ್ತಿದ್ದಾರೆ?’

‘ಮಗ, ಸೊಸೆ ಅಮೆರಿಕಾದಲ್ಲಿ; ಮಗಳು, ಅಳಿಯ ಆಸ್ಟೇಲಿಯಾದಲ್ಲಿ ಇದ್ದಾರೆ’ ಹೆಮ್ಮೆಯಿಂದ ಹೇಳಿದರು.

‘ಹೆಂಡ್ತಿ?’

‘ಸೊಸೆಯ ಬಾಣಂತನಕ್ಕೆಂದು ಅಮೆರಿಕಾಗೆ ಹೋದವಳು ಅಲ್ಲೇ ಮಣ್ಣಾದಳು. ಇಲ್ಲಿಗೆ ಹೆಣ ತರುವ ಖರ್ಚಿಗಿಂತ ಅಲ್ಲೇ ಸಂಸ್ಕಾರ ಮಾಡುವ ಖರ್ಚು ಕಮ್ಮಿ ಅಂತ ಮಗ ಅಲ್ಲೇ ಮುಗಿಸಿದ. ಕಡೆಗಾಲದಲ್ಲಿ ಹೆಂಡ್ತಿ ಮುಖ ನೋಡಲೂ ಆಗಲಿಲ್ಲ’.

‘ನಿಮ್ಮನ್ನು ನೋಡಲು ಮಕ್ಕಳು ಆಗಾಗ ಬರ್ತಾರಾ?’

‘ಬರೋಲ್ಲ, ಆಸ್ತಿ ವಿಚಾರವಾಗಿ ಮಕ್ಕಳು ಮುನಿಸಿಕೊಂಡಿದ್ದಾರೆ’.

‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ ಎಂದು ದೊಡ್ಡವರು ಹೇಳಿದ್ದಾರೆ’.

‘ಮಕ್ಕಳಿಗೆ ಎರಡನ್ನೂ ಮಾಡಿದೆ. ಕಷ್ಟಪಡಬೇಡ, ಮನೆ ಮಾರಿ ವೃದ್ಧಾಶ್ರಮ ಸೇರಿಕೊ ಅಂತ ಮಕ್ಕಳು ಹೇಳ್ತಿದ್ದಾರೆ. ಆಸೆಪಟ್ಟು, ಸರ್ವೀಸ್ ಪೂರಾ ಸಾಲದ ಕಂತು ಕಟ್ಟಿ ಉಳಿಸಿಕೊಂಡಿರುವ ಮನೆಯಲ್ಲೇ ಜೀವ ಬಿಡ್ತೀನಿ, ಮಾರೋದಿಲ್ಲ’.

‘ಪಾಪ! ನೀವು ಒಬ್ಬಂಟಿ’.

‘ಇಲ್ಲ, ನಾನು ಬೆಳೆಸಿದ ಈ ಮರದ ನೆರಳಿದೆ, ಸಾಕಿದ ಈ ನಾಯಿ ಸಹಾಯಕ್ಕಿದೆ. ಅಂಗಡಿಗೆ, ವಾಕಿಂಗ್‍ಗೆ ಹೋಗುವಾಗ ನಾಯಿ ಸಹಾಯಕ್ಕೆ ಬರುತ್ತದೆ. ಮಕ್ಕಳು ದೂರವಾದರೂ ಈ ಮರ, ನಾಯಿ ಬಿಟ್ಟುಹೋಗಲ್ಲ’.

‘ಪೋಷಕರನ್ನು ಆರೈಕೆ ಮಾಡದ ಮಕ್ಕಳಿಗೆ ಆಸ್ತಿ ಹಕ್ಕು ಇಲ್ಲವಂತೆ...’

ಬೊಚ್ಚುಬಾಯಿ ಬಿಟ್ಟು ನಕ್ಕ ತಿಮ್ಮಜ್ಜ, ತಡವರಿಸಿಕೊಂಡು ಮೇಲೆದ್ದರು. ನಾಯಿ ಊರುಗೋಲನ್ನು ಕಚ್ಚಿಕೊಂಡು ತಂದುಕೊಟ್ಟಿತು. ತಿಮ್ಮಜ್ಜ ಕೋಲೂರಿಕೊಂಡು ಮನೆ ಒಳಗೆ ಹೋದರು. ನಾಯಿ ಹಿಂಬಾಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.