‘ಇವರಿಗೆ ಮೈಸೂರೂ ಬೇಕಿಲ್ಲ, ಮೈಸೂರು ಸ್ಯಾಂಡಲ್ಲೂ ಬೇಕಿಲ್ಲ…’ ತಿಂಗಳೇಶನ ಬೈಟೂ ಕಾಫಿ ಬಳಗದಲ್ಲಿ ಗೊಣಗಾಟ ಶುರುವಾಯಿತು.
‘ದೇಶಾಭಿಮಾನದ ಒಂಚೂರು ಭಾಗವಾದ್ರೂ ರಾಜ್ಯಾಭಿಮಾನ ಇದ್ದಿದ್ರೇ... ಬಾಲಿವುಡ್ ತಾರೆಗೆ 6 ಕೋಟಿಗೂ ಹೆಚ್ಚು ದುಡ್ಡು ಕೊಟ್ಟು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಮಾಡುತ್ತಿದ್ದರಾ?’
‘ಹೌದು, ಇದು ಸ್ಯಾಂಡಲ್-ವುಡ್‌ಗೆ ಮಾಡಿದ ಘೋರ ಅನ್ಯಾಯ!’
‘ಮೈಸೂರು ಬ್ಯಾಂಕನ್ನು ಬೇರೆ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಕೂಡಿಕೆ ಮಾಡಿದ್ದಾರೆ. ಈ ಬ್ಯಾಂಕಿನ ಸಿಬ್ಬಂದಿ ಹಿಂದಿ ರಾಯಭಾರಿಗಳಾಗಿ ನಾಡಿನ ತುಂಬಾ ಆವರಿಸಿದ್ದಾರೆ’.
‘ಮೈಸೂರು ಪಾಕ್ ಕೂಡ ‘ಶ್ರೀ’ಪಾದ ಕಾಣುವಂತಿದೆ’.
‘ಭ್ರಷ್ಟಾಚಾರ ತಾರಕಕ್ಕೇರಿದೆ ಅಂತ ಆರೋಪಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ನೌಕರರ ಸಂಘ, ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದೆ’.
‘ಮೈಸೂರು ಸ್ಯಾಂಡಲ್ ಸೋಪಿಗೆ ಬೇರೇನಾದರೂ ನಾಮಕರಣ ಮಾಡಿದರೆ ಸರಿಹೊಂದುತ್ತದೆ’ ತಿಂಗಳೇಶ ಸೇರಿಸಿದ.
‘ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿ ಡಿಕೆಶಿ ರಿಯಲ್ ಎಸ್ಟೇಟಿಗೆ ಉತ್ತೇಜನ ನೀಡಿದ್ದಾರೆ ನೋಡಿ’ ಮತ್ತೊಬ್ಬ ತಿರುವು ನೀಡಿದ.
‘ಪರಮೇಶ್ವರ ತುಮಕೂರನ್ನು ಬೆಂಗಳೂರು ಪಶ್ಚಿಮ, ಮುನಿಯಪ್ಪ ಕೋಲಾರವನ್ನು ಬೆಂಗಳೂರು ಪೂರ್ವ, ಸುಧಾಕರ ಚಿಕ್ಕಬಳ್ಳಾಪುರವನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಿಸಲು ಬೇಡಿಕೆ ಇಟ್ಟರೆ ರಾಜ್ಯ ತತ್ತರಿಸುತ್ತದೆ’.
‘ಅಷ್ಟೇ ಆದರೆ ಪರವಾಗಿಲ್ಲ, ಬೆಂಗಳೂರು ರಾಜ್ಯ ಮಾಡಿಕೊಂಡು ನೀವೇ ಇಟ್ಟುಕೊಳ್ಳಿ, ಧಾರವಾಡ ರಾಜ್ಯ ನಮಗಿರಲಿ ಎಂದು ಸದ್ಯ ಬಿಡುವಾಗಿರುವ ಯತ್ನಾಳ್ ಹೋರಾಟಕ್ಕಿಳಿದರೆ ಕಷ್ಟ!’
‘ಒಟ್ಟಾರೆ ಅಖಂಡ ರಾಜ್ಯಕ್ಕೆ ಏನೋ ಕುತ್ತು ಬಂದಂತಿದೆ. ನಮ್ಮ ಹೊಳೆನರಸೀಪುರದ ಸಂಕಷ್ಟತಜ್ಞರ ನೆರವು ಪಡೆದು ಪರಿಹಾರ ಯಾಗ ಮಾಡಬೇಕು’ ತಿಂಗಳೇಶ ಮಾತು ಮುಗಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.