ADVERTISEMENT

ಚುರುಮುರಿ: ಆಷಾಢ(ಭೂತಿ) ಗಾಳಿ!

ತುರುವೇಕೆರೆ ಪ್ರಸಾದ್
Published 1 ಜುಲೈ 2022, 19:36 IST
Last Updated 1 ಜುಲೈ 2022, 19:36 IST
ಚುರುಮುರಿ
ಚುರುಮುರಿ   

ಪರ್ಮೇಶಿ ಪೇಪರ್ ಹಿಡಿದು ಕುಳಿತಿದ್ದ. ‘ಅಯ್ಯೋ! ಏನ್ ಗಾಳಿ ರೀ! ಕ್ಲಿಪ್ ಹಾಕಿದ್ ಬಟ್ಟೆ ಎಲ್ಲಾ ಕಿತ್ಕೊಂಡು ಹೋಗ್ತಿವೆ’ ಬಟ್ಟೆ ಹಿಡಿದು ಬಂದರು ಪದ್ದಮ್ಮ.

‘ಕ್ಲಿಪ್ ಹಾಕಿದ ಬಟ್ಟೆ ಇರಲಿ, ವಿಪ್ ಕೊಟ್ಟಿದ್ದ ಪಕ್ಷಗಳೇ ಕಿತ್ಕೊಂಡ್ ಹೋಗ್ತಿವೆ. ಪಕ್ಕದ ರಾಜ್ಯದಲ್ಲಂತೂ ಭಿನ್ನಮತದ ಆಷಾಢಭೂತಿ ಗಾಳಿ ಎದ್ದು ಸರ್ಕಾರನೇ ಎಗರ್ಕೊಂಡ್ ಹೋಯ್ತು...’

‘ನಿಜ ರೀ, ನಾನೂ ಟೀವಿಲಿ ನೋಡ್ದೆ. ಆಷಾಢದಲ್ಲೇ ಭಿನ್ನಮತ ಜಾಸ್ತಿ ಅಲ್ವಾ?’

ADVERTISEMENT

‘ಹೂ! ಯಾಕಂದ್ರೆ ಗಾಳಿಗೆ ಶಾಮಿಯಾನ, ಜಮಖಾನ ಕಿತ್ಕೊಂಡ್ ಹೋಗುತ್ವೆ. ಆದರೂ ಬಿಳಿ ಖಾದಿ ಮೈಗೆ ಅಂಟಿಕೊಂಡು ಜೇಬು, ಹೊಟ್ಟೆ ಎರಡರ ಗಾತ್ರನೂ ತೋರಿಸಿಬಿಡುತ್ತೆ’.

‘ಆದ್ರೂ ಅವರು ಆಶ್ವಾಸನೆಗಳ ಗಾಳಿಪಟ ಹಾರಿಸೋದನ್ನ ಮಾತ್ರ ಬಿಡಲ್ಲ ಬಿಡಿ’.

‘ಸಮಾವೇಶಗಳನ್ನ ಮಾಡಲ್ಲವಲ್ಲ, ಹಾಗಾಗಿ ಅತೃಪ್ತರಿಗೆ ಗುಂಡು, ಬಾಡೂಟ ಸಿಗದೆ ಬಂಡಾಯದ ಬಾವುಟ ಹಾರುಸ್ತಾರೆ’.

‘ಒಟ್ನಲ್ಲಿ ಈ ಆಷಾಢದ ಗಾಳಿ ಯಾರ್‍ಯಾರನ್ ಎಲ್ಲೆಲ್ಲಿಗೆ ಎತ್ ಎಸೆಯುತ್ತೋ! ಹುಶಾರಾಗಿರ್ಬೇಕು ಅಲ್ವಾ?’

‘ಹುಶಾರಾಗಿರ್ಬೇಕು ನಿಜ, ಹಾಗಂತ ಹೆದರ್ಕೋಬಾರದು. ಗಾಳಿ ಬಂದಾಗ ತೂರಿಕೋ ಅಂತ ಗಾದೆನೇ ಇದ್ಯಲ್ಲ. ಈಗ ನೋಡು ಉದ್ಧವ್ ಜೊತೆ ಇದ್ದೋರೆಲ್ಲ ಶಿಂಧೆ ಜೊತೆ ತೂರ್ಕೊಂಡ್ರು. ಅದೇ ತರ ಒವೈಸಿ ಪಕ್ಷದ ನಾಲ್ಕು ಜನ ಎಂಎಲ್‍ಎಗಳುಲಾಲೂ ಅವರ ಆರ್‌ಜೆಡಿಗೆ ತೂರ್ಕೊಂಡ್ ಬಿಟ್ರಲ್ಲ’.

‘ನಮ್ಮಲ್ಲೂ ಕೆಲವರು ತೆನೆ ಪಕ್ಷದೋರು ಅಲ್ಲಿ ಇಲ್ಲಿ ತೂರ್ಕೊಳೋಕೆ ತುದಿಗಾಲಲ್ಲಿ ನಿಂತಿದಾರಂತೆ’.

‘ಗಾಳಿಗೆ ಜೊಳ್ಳೆಲ್ಲಾ ತೂರಿ ಗಟ್ಟಿಕಾಳುಗಳು ಮಾತ್ರ ಉಳ್ಕಳುತ್ವೆ ಅಂತ ಆಷಾಢ(ಭೂತಿ) ನಾಯಕರ ಸಮರ್ಥನೆ ಇದ್ದೇ ಇರುತ್ತೆ...’.

‘ಈ ರಾಜಕೀಯದ ಪುಂಗಿ ಊದಿದ್ದು ಸಾಕು. ಮದುವೆ, ಮುಂಜಿ ಏನೂ ಇಲ್ಲ, ಚಿನ್ನದ ರೇಟ್ ಕಮ್ಮಿಯಾಗಿದೆಯಂತೆ, ಇದೇ ಛಾನ್ಸು! ನಡೀರಿ ಒಂದಿಷ್ಟು ಒಡವೆ ತಗೊಂಡು ಬರೋಣ’.

‘ಕರ್ಮ! ಮದುವೆಯಾದ ಹೆಂಗಸರು ಆಷಾಢದಲ್ಲಿ ಪ್ರತಿವರ್ಷ ತವರಿಗೆ ಹೋಗ್ಬೇಕು ಅಂತ ಯಾಕ್ ಸಂಪ್ರದಾಯ ಮಾಡಲಿಲ್ಲವೋ’ ಎಂದು ತಲೆ ಚಚ್ಚಿಕೊಂಡ ಪರ್ಮೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.