ADVERTISEMENT

ಚುರುಮುರಿ | ಸಂಕ್ರಾಂತಿ ಫಲಗಳು

ಲಿಂಗರಾಜು ಡಿ.ಎಸ್
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
   

2025ರ ಮಕರ ಸಂಕ್ರಾಂತಿಯ ಪ್ರಭಾವದಿಂದ ನಾಡು ಮಿಶ್ರ ಫಲಿತಾಂಶಗಳನ್ನು ಹೊಂದಿರಲಿದೆ. ಸಂಕ್ರಾಂತಿ ಪುರುಷನು ಕೈಯಲ್ಲಿ ಖಡ್ಗ ಹಿಡಿದು ತೆರಳುತ್ತಿರುವುದರಿಂದ ಅಂತರ್ಯುದ್ಧ ಭೀತಿ. ಚೀನಿ ವೈರಸ್ಸುಗಳಿಂದ ರೋಗ ಭಯವು. ರೈತರಿಗೆ ಬೆಲೆ ಕುಸಿತ, ಬೆಳೆ ಹಾನಿಯ ದುಷ್ಫಲವು. ಬ್ಯಾಂಕ್ ಬಡ್ಡಿ ದರ ಇಳಿಕೆ, ಬಸ್ ಪ್ರಯಾಣ ದರ, ದಿನಸಿ ಬೆಲೆ ಗಗನಕ್ಕೆ, ಚಿನ್ನ-ಬೆಳ್ಳಿ ತೇಜಿಯಾಗುವುವು.

ರಾಜರಿಗೆ ಸುಭಿಕ್ಷಾ ಫಲಗಳಿದ್ದರೂ ಸುಖವಿಲ್ಲ. ಟ್ರಂಪು ಚಕ್ರವರ್ತಿಗಳಿಗೆ ನೀಲಿ ಚಿತ್ರದಿಂದ ತಲೆಬೇನೆ. ರಾಜಕಾರಣಿಗಳಿಗೆ ನಿರಂತರ ಧನಲಾಭ ಮತ್ತು ಸ್ವಂತ ಅಭಿವೃದ್ಧಿಗಾಗಿ ನಿದ್ರಾನಾಶ. ರಾಜ್ಯದಲ್ಲಿ ಅಧಿಕಾರದ ಸ್ಥಿರತೆಯ ಕೊರತೆಯಿಂದ ಪಕ್ಷಗಳಲ್ಲಿ ಆಂತರಿಕವಾಗಿ ಚೇರುಪೇರು ಸಂಭವ. ಭೋಜನಕೂಟಗಳ ಶೆಡ್-ಯಂತ್ರಗಳಿಂದ ಪಕ್ಷಗಳ ಹೈಕಮಾಂಡುಗಳು ಸುಸ್ತು. ಶಾಸಕರನ್ನು ಸೆಳೆಯಲು ಪಕ್ಷಾಂತರ ಮಂತ್ರದ ಪ್ರಯೋಗ.

ಹಿಂಬಾಲಕರು, ಗುತ್ತಿಗೆದಾರರ ನಡುವೆ ಪರ್ಸೆಂಟೇಜ್ ಕಲಹ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಫೇಲು. ಕಮಲ ಗೋತ್ರದವರಿಗೆ ನಮೋ, ಶಾ ಪ್ರಾರ್ಥನೆ ಒಳಿತನ್ನು ಉಂಟು ಮಾಡಿದರೆ ಹಸ್ತಗೋತ್ರದವರಿಗೆ ಸೋಗಾ ಮತ್ತು ರಾಗಾ ಧ್ಯಾನ ಶ್ರೇಯಸ್ಕರ.

ADVERTISEMENT

ಜನತೆಯ ಗೋಚಾರಫಲದಲ್ಲಿ ಮಾನಸಿಕ ಶಕ್ತಿ ಹೆಚ್ಚಳ. ವೈ-ಕುಂಠ ವೇ-ಕಾದಶಿಯಲ್ಲಿ ಸ್ವರ್ಗ ದರ್ಶನಕ್ಕೆ ನೂಕುನುಗ್ಗಲು. ತಾರೆಗಳಿಗೆ ಬೇಲು ಭಾಗ್ಯ, ಜನತೆಗೆ ಟೋಲು ಬಾಧೆ. ಅತಿಥಿ ಉಪನ್ಯಾಸಕರಿಗೆ ಉದ್ಯೋಗ ನಷ್ಟ ಸಂಭವ. ಡಿಜಿಟಲ್ ಅರೆಸ್ಟ್ ಹೆಚ್ಚುವುದು. ಶ್ರಮಜೀವಿಗಳಿಗೆ ಕುಂಭಮೇಳ, ಸಂಕ್ರಾಂತಿ, ರೊಟ್ಟಿಹಬ್ಬದ ಸಂಭ್ರಮ. ರಾಜಕಾರಣಿಗಳಿಗೆ ಅಧಿಕಾರ ದೊರೆಯದ ಬೇಗುದಿ.

ಸರ್ಕಾರಿ ನೌಕರರ ಗುರುಬಲ ಅಮೋಘವಾಗಿದ್ದು ಕನಕವರ್ಷ ಸಾಧ್ಯತೆ. ಆದರೆ ಲೋಕಾಯುಕ್ತ ಗ್ರಹಗಳಿಂದ ದಾಳಿಯ ಭಯ ಕಾಡಲಿದೆ. ಸಾಲ-ಸೋಲುಗಳ ನಡುವೆ ನಗುವನ್ನು ಮರೆಯದವರಿಗೆ ಸುಖನಿದ್ರಾ ಪ್ರಾಪ್ತಿರಸ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.