ADVERTISEMENT

ಚುರುಮುರಿ: ಖೇಲ್‌ ಖತಂ ಭಾಗ್ಯ

ಲಿಂಗರಾಜು ಡಿ.ಎಸ್
Published 6 ಫೆಬ್ರುವರಿ 2023, 19:18 IST
Last Updated 6 ಫೆಬ್ರುವರಿ 2023, 19:18 IST
.
.   

ತಮ್ಮ ಹಿಂಭಾರ, ಮುಂಭಾರ ಹೊತ್ತುಕೊಂಡು ದೇಕುತ್ತಾ ಬಂದ ರಾಜಕಾರಣಿ ‘ತುರೇಮಣೆಣ್ಣ ಯಂಗದೀರಿ? ಅಕ್ಕಾರಿಗೆ ಗಿಫ್ಟ್‌ ಕೊಡದದೆ, ಸಂದೇನಾಗ ಬತ್ತೀನಿ. ಈ ಸಾರಿ ನನಗೇ ವೋಟಾಕಬಕು’ ಅಂತ ತಾಕೀತು ಮಾಡಿದರು.

‘ಇದೇನಣೈ, ಏನೋ ತರಾತುರೀಲಿದೀರಾ?’ ತುರೇಮಣೆ ಕೇಳಿದರು. ‘ಬಜೆಟ್ ಮೀಟಿಂಗ್ ನಡೀತಾ ಅದಲ್ಲ, ನಮ್ಮ ಇಶ್ಯೂಗಳನ್ನೂ ಸೇರ್ಸಮು ಅಂತ ಹೊಂಟಿದ್ದೀನಿ’ ಅಂದರು ನಾಯಕರು.

‘ಏನಣ್ಣ ಅವು?’ ತುರೇಮಣೆ ವಿಚಾರಿಸಿದರು.

ADVERTISEMENT

‘ನೇತಾರರ ಪಕ್ಷಾಂತರ ಶೇವೆ, ತ್ಯಾಗ ಮನ್ನಿಸಿ ತ್ಯಾಗಭೂಷಣ ಪ್ರಶಸ್ತಿ ಕೊಡಬಕು. ಎಲೆಕ್ಸನ್ನಿಗೆ ಮೊದಲು ಕುಕ್ಕರ್‍ರು, ಸೀರೆ, ಸ್ಟವ್ವು ಕೊಡದು ಪುಗಸಟ್ಟೆ ಭಾಗ್ಯ ಅನ್ನೋ ಯೋಜನೆಯಲ್ಲಿ ಬರಬಕು’ ಅಂತಂದ್ರು.

‘ಬಜೆಟ್ಟಲ್ಲಿ ಅಕ್ಕಾರು ನಮಗೆ ಏನೇನೋ ಕೊಡ್ತೀವಿ ಅಂದವ್ರೆ’ ತುರೇಮಣೆ ಚಿಮುಟ ಆಡಿಸಿದರು.

‘ದಡ್ಡಾ ದಡ್ಡಾ, ಬಜೆಟ್ ಕಾಸೆಲ್ಲಾ ಎಲ್ಲಿಗೋಗಿ ಸೇರ್ತದೆ ಗೊತ್ತಾ? ಎಲ್ಲಾ ಕಾಮಗಾರಿಗಳಲ್ಲೂ ನಮಗೆ ಪರ್ಸೆಂಟೇಜ್ ತೆಗೆದಿಡೋ ರಾಜಪಾಲು ಯೋಜನೆ ಮಾಡಬಕು. ನಮ್ಮ ಆದಾಯಕ್ಕೆ ತೆರಿಗೆ ಮನ್ನಾ ಆಗಬೇಕು. ಮುಂದ್ಲ ಎಲೆಕ್ಷನ್ನುಗಳಲ್ಲಿ ಹೆಂಡ್ರು, ಮಕ್ಕಳಿಗೇ ಟಿಕೆಟ್ ಕೊಡೋ ವಂಶಪಾರಂಪರ್ಯದ ಬರಾವರ್ದು ಭಾಗ್ಯ ತರಬೇಕು. ಇಂತಾ ಕುಯುಕ್ತಿಗಳ ಬಗ್ಗೆ ತಿಳಕಣಕೆ ಅಧ್ಯಯನ ಕೂಠ ಆಗಬೇಕು’ ಅಂತಂದ್ರು.

‘ಅಣೈ, ಇಂತಾ ಯೋಜನೆಗಳಿಲ್ಲದೆ ನಿಮಗೆ ಬದುಕು ಬಂಡಾಟಾಗ್ಯದೇನೋ’ ತುರೇಮಣೆ ಪುಳ್ಳೆ ಹಾಕಿದರು. ‘ನೋಡು, ನಿನಗೀಗ ಅರ್ಥ ಆಯ್ತು, ನಮ್ಮ ವೈವಾಟು ನೂರಿರತವೆ, ಅದುಕ್ಕೆಲ್ಲ ಕಾಸು ಎಲ್ಲಿಂದ ಬಂದತ್ತು? ಸಾಯಗಂಟ ಶಾಸಕನಾಗಬಕು, ಮಂತ್ರಿಯಾಗಬಕು ಅಂತ ತರದೂದು ಮಾಗಾಡದ್ಯಾಕೆ ಅಂದ್ಕಂದೀಯೇ?’ ನಾಯಕರು ಹಲ್ಲುಕಿಸಿದರು.

‘ಸೂಪರ್ ಕಣಣ್ಣ, ಇನ್ನೊಂದು ಯೋಜನೆ ಬುಟ್ಬುಟ್ರಿ, ಹಳೆ ವಾಹನ ಗುಜರೀಗೆ ಹಾಕಿದಂಗೇ ಮೂರುಸಾರಿ ಶಾಸಕನಾದೋನ್ನ ವಂಶಾನೇ ಎಲೆಕ್ಷನ್ನಿಂದ ರಿಟೈರ್ ಮಾಡೋ ಖೇಲು ಖತಂ ಭಾಗ್ಯ ತರಬಕು ಅಲ್ಲುವರಾ?’ ತುರೇಮಣೆ ಮಾತಿಗೆ ನಾಯಕರ ಕರೀ ಮುಖ ಕೆಂಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.