ADVERTISEMENT

ಚುರುಮುರಿ: ಸುಮ್ಮನಿದ್ದಿದ್ದರೆ...

ಆನಂದ ಉಳಯ
Published 10 ಫೆಬ್ರುವರಿ 2023, 19:10 IST
Last Updated 10 ಫೆಬ್ರುವರಿ 2023, 19:10 IST
churumuri column on politics
churumuri column on politics   

‘ಅನೇಕ ವೇಳೆ ಏನೂ ಮಾಡದೆ ಸುಮ್ಮನಿದ್ದರೆ ಸಾಕು ಅದೇ ಫಲ ಕೊಡುತ್ತದೆ’ ಎಂದು ಮಡದಿ ಹೇಳಿದಾಗ ಅವಳು ತತ್ವಜ್ಞಾನಿಯಂತೆ ಕಂಡಳು.

ಏನೂ ಮಾಡದೆ ಸುಮ್ಮನಿದ್ದರೆ ಸಾಕು ಎಂದರೆ? ಅದೇ ಫಲವನ್ನೂ ಕೊಡುತ್ತದೆ ಎಂದರೆ ಇನ್ನೂ ಗೊಂದಲಕಾರಿ ಅಲ್ಲವೆ? ‘ಅಮ್ಮಾ ತಾಯಿ, ಸ್ವಲ್ಪ ವಿವರಿಸು’ ಎಂದೆ.

‘ಬಿಬಿಸಿ, ಮೋದೀಜಿ ಬಗ್ಗೆ ಹಳೆಯದನ್ನೆಲ್ಲಾ ಕೆದಕಿ ಒಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಅದರಲ್ಲಿರುವುದೆಲ್ಲಾ ನಿಜ ಎಂದು ಅದರ ವಾದ. ಅದಕ್ಕೆ ಸರ್ಕಾರ ಸುಪ್ರೀಂ ಕೋರ್ಟೇ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವಾಗ ಈ ಸಾಕ್ಷ್ಯಚಿತ್ರ ಬೇಕಿತ್ತೆ ಎಂದು ಹೇಳಿ ಅಷ್ಟಕ್ಕೆ ಸುಮ್ಮನಿದ್ದಿದ್ದರೆ ಸಾಕಿತ್ತು. ಅದನ್ನು ನಿರ್ಬಂಧಿಸಿ, ಪ್ರದರ್ಶನ ತಡೆಯಲು ಪ್ರಯತ್ನಿಸುತ್ತಿದ್ದಂತೆ ಸಾಕ್ಷ್ಯಚಿತ್ರದ ಬಗ್ಗೆ ಜನರ ಕುತೂಹಲ ಹೆಚ್ಚತೊಡಗಿತು. ಸರ್ಕಾರ ಅದನ್ನು ಅಲಕ್ಷಿಸಿದ್ದಿದ್ದರೆ ಪ್ರಚಾರವೇ ಸಿಗುತ್ತಿರಲಿಲ್ಲ’.

ADVERTISEMENT

‘ಯು ಹ್ಯಾವ್ ಎ ಪಾಯಿಂಟ್’.

‘ಇನ್ನೊಂದು, ಶಾರುಖ್ ಖಾನ್‍ರ ‘ಪಠಾಣ್’ ಚಿತ್ರ. ಯಾವುದೋ ಒಂದು ನೆಪ ಮುಂದೊಡ್ಡಿ, ಅದನ್ನು ಬಾಯ್ಕಾಟ್ ಮಾಡಬೇಕು ಎಂದು ಕೆಲವರು ಕೂಗೆಬ್ಬಿಸಿದರು. ಆದರೇನಾಯಿತು ಕೊನೆಗೆ? ಜನ ನೋಡೋದಿಕ್ಕೆ ಶುರು ಮಾಡಿದರು. ಚಿತ್ರ ಕೋಟಿ ಕೋಟಿ ಬಾಚ್ಕೊಳ್ತಿದೆ. ಬಾಯ್ಕಾಟ್ ಮಾಡಿ ಎಂದವರೇ ಎಸ್‍ಆರ್‌ಕೆಗೆ, ನಿರ್ಮಾ‍ಪಕರಿಗೆ ಪರೋಕ್ಷವಾಗಿ ಸಹಾಯ ಮಾಡಿದಂತಾಯಿತು...’

‘ಸುಮ್ಮನಿದ್ದಿದ್ದರೆ...?’

‘ಚಿತ್ರ ಚೆನ್ನಾಗಿದ್ದರೆ ತಾನಾಗಿಯೇ ಯಶಸ್ಸು ಕಾಣುತ್ತದೆ. ಬಹಿಷ್ಕರಿಸಿ, ಬಹಿಷ್ಕರಿಸಿ ಅಂತ ಬೊಬ್ಬಿಡ್ತಾ ಇದ್ದರೆ ಚೆನ್ನಾಗಿಲ್ಲದೇ ಇರೋ ಚಿತ್ರ ಸಹ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತದೆ. ‘ಪಠಾಣ್‌’ ಗಳಿಕೆ ನೋಡಿ ಎಸ್‍ಆರ್‌ಕೆಗೇ ಆಶ್ಚರ್ಯ ಆಗಿರಬಹುದು’.

‘ಬಹಿಷ್ಕಾರ ಬ್ರಿಗೇಡ್ ಈಗೇನು ಮಾಡ್ತಿರಬಹುದು?’

‘ಅವರೂ ಗುಟ್ಟಾಗಿ ಸೆಕೆಂಡ್ ಷೋ ನೋಡಿಕೊಂಡು ಬಂದಿರಬಹುದು. ದೀಪಿಕಾ ಪಡುಕೋಣೆ ಡ್ಯಾನ್ಸ್ ಖುಷಿ
ಕೊಟ್ಟಿರಲೂಬಹುದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.