ADVERTISEMENT

ಚುರುಮುರಿ: ಪಾಪ... ದೇವರು!

ಸುಮಂಗಲಾ
Published 14 ಡಿಸೆಂಬರ್ 2025, 23:30 IST
Last Updated 14 ಡಿಸೆಂಬರ್ 2025, 23:30 IST
   

‘ನಾವು ಒಂದನೇ ಕ್ಲಾಸಿದ್ದಾಗ ಎಂಥಾ ಛಂದಿತ್ತು. ಒಂದು ಎರಡು, ಬಾಳೆಲೆ ಹರಡು ಅಂತ ಪದ್ಯ ಹಾಡತಿದ್ದವಿ’ ಎಂದು ಬೆಕ್ಕಣ್ಣ ನೆನಪಿಸಿಕೊಂಡಿತು.

‘ಈಗ ಒಂದರಿಂದ ಹತ್ತು ಮುಗಿದಿತ್ತು, ಊಟದ ಆಟವು ಮುಗಿದಿತ್ತು ಅಂತ ಪದ್ಯ ಮುಗಿಸುವ ಹಂಗೇ ಇಲ್ಲ!’ ಎಂದು ನಕ್ಕೆ ನಾನು.

‘ಅದೇ ಮತ್ತೆ… ದಿನಾ ಒಂದಲ್ಲಾ ಒಂದು ಬಣದ ನಾಯಕರು ಒಂದು ಎರಡು ಬಾಳೆಲೆ ಹರಡು ಹಾಡತಾರೆ… ಹಿಂಬಾಲಕರು ಮೂರು ನಾಕು, ಸಿಎಂ ಕುರ್ಚಿ ಬೇಕು, ಐದು ಆರು, ಕುರ್ಚಿ ಮೇಲೆ ಕೂರು ಅಂತ ಸೋಗುಡತಾರೆ! ಊಟದ ಆಟ ಮುಗಿಯಂಗೇ ಇಲ್ಲ’ ಎಂದು ಬೆಕ್ಕಣ್ಣ ಗುರುಗುಟ್ಟಿತು.

ADVERTISEMENT

‘ಡಿಕೆಶಿ ಅಂಕಲ್ಲಿಗೆ ಸಿಎಂ ಕುರ್ಚಿ ಸಿಗೂತನಾ ಊಟದ ಆಟ ನಡೆಯೂ ಹಂಗೆ ಕಾಣತೈತೆ’ ಎಂದೆ.

‘ಪಾಪ… ಕೈ ಹೈಕಮಾಂಡ್‌ ದೇವರಿಗೆ ಇದ್ನೆಲ್ಲ ನೋಡಿ ವಾಕರಿಕೆ ಬಂದಿರಬೌದು’ ಎಂದು ಬೆಕ್ಕಣ್ಣ ಅನುಕಂಪದಿಂದ ಲೊಚಗುಟ್ಟಿತು.

‘ಅತ್ತಾಗೆ ವಿಜ್ಯಣ್ಣ–ಯತ್ನಾಳಂಕಲ್ಲಿನ ನಾಲಿಗೆ ನಿಯಂತ್ರಣ ಸಾಧಿಸಲಾಗದೇ ಕಮಲ ಹೈಕಮಾಂಡ್‌ ದೇವರಿಗೂ ಚಿಂತಿಯಾಗಿರಬೌದು’.

‘ಈ ಮನುಷ್ಯ ಹೈಕಮಾಂಡ್‌ ದೇವರುಗಳ ಕತಿ ಬಿಡು. ಅತ್ತಾಗೆ ಪಾಪ ತಿರುಪತಿ ತಿಮ್ಮಪ್ಪನಿಗೂ ಕಲಬೆರಕೆ ನೋಡೀ ನೋಡೀ ಬ್ಯಾಸರಕಿ, ಸಿಟ್ಟು ಬಂದಿರಬೌದು?’ ಎಂದು ಬೆಕ್ಕಣ್ಣ ಚಿಂತೆಯ ಧ್ವನಿಯಲ್ಲಿ ಹೇಳಿತು.

‘ಆವಾಗ ತಿರುಪತಿ ತಿಮ್ಮಪ್ಪನ ಲಡ್ಡು ಮಾಡಕ್ಕೆ ಕಲಬೆರಕೆ ತುಪ್ಪ ಪೂರೈಕೆ… ಈಗ ರೇಷ್ಮೆ ಶಲ್ಯ ಅಂತ ಪಾಲಿಸ್ಟರ್‌ ಶಲ್ಯದ ಪೂರೈಕೆ… ಅದೂ ಕಳೆದ ಹತ್ತು ವರ್ಷಗಳಿಂದ!’

‘ಅಲ್ಲಾ… ತಿಮ್ಮಪ್ಪನಿಗೇ ಪಂಗನಾಮ ಹಾಕಿ ವಂಚನೆ, ಭ್ರಷ್ಟಾಚಾರ ಮಾಡೋವ್ರು ಒಂದು ಕಡೆ… ಭಕ್ತರಿಗೆ ಶುದ್ಧವಾದ ಪ್ರಸಾದ, ರೇಷ್ಮೆ ಶಲ್ಯವನ್ನೂ ನೀಡಲಾಗದ ತಿರುಪತಿ ದೇವಸ್ಥಾನ ಟ್ರಸ್ಟ್ ಇನ್ನೊಂದು ಕಡೆ… ಇಬ್ಬರ ನಡುವೆ ಯಾವ ಭ್ರಷ್ಟರಿಗೂ ಶಿಕ್ಷೆ ನೀಡಲಾಗದೇ, ನಿಜಭಕ್ತರನ್ನೂ ರಕ್ಷಿಸಲಾಗದ ಅಸಹಾಯಕ ತಿಮ್ಮಪ್ಪ… ಪಾಪ!’ ಎಂದು ಬೆಕ್ಕಣ್ಣ ತಾನೂ ಅಸಹಾಯಕತೆಯಿಂದ ಮತ್ತೆ ಲೊಚಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.