‘ಅಬ್ಬಾ!... ಯುದ್ಧ ಇಷ್ಟೊಂದು ಭಯಂಕರವಾಗಿ ಇರುತ್ತದಾ?!’ ಟಿ.ವಿ. ನ್ಯೂಸ್ ನೋಡುತ್ತಾ ಕುಳಿತಿದ್ದ ಮಗ ಬೆಚ್ಚುತ್ತಾ ಕೇಳಿದ.
‘ಅದು ಯುದ್ಧ ಅಲ್ಲ, ಸಂಘರ್ಷ ಅಷ್ಟೇ’ ಅಂದ ಶಂಕ್ರಿ.
‘ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಕ್ರಿಕೆಟ್ ಮ್ಯಾಚನ್ನೇ ಯುದ್ಧ ಅಂತ ಅಂದುಕೊಂಡಿದ್ದೆ. ಯುದ್ಧವೆಂದರೆ ಕ್ರಿಕೆಟ್ ಸ್ಟೇಡಿಯಂನಲ್ಲಿ ರನ್ ಹೊಡೆಯೋದಲ್ಲ, ಗುಂಡು ಹೊಡೆಯೋದು’ ಅಂದಳು ಮಗಳು.
‘ಕ್ರಿಕೆಟ್‍ನಲ್ಲಿ ಔಟಾದರೆ ಅಥವಾ ಡೌಟಾದರೆ ಥರ್ಡ್ ಅಂಪೈರ್ ಡಿಸಿಷನ್ ಕೇಳಬಹುದು. ಆದರೆ ಯುದ್ಧದಲ್ಲಿ ಔಟಾದರೆ ಹೆಣ ಎತ್ತಬೇಕು ಅಷ್ಟೆ’ ಶಂಕ್ರಿ ಹೇಳಿದ.
‘ಕ್ರಿಕೆಟ್‍ನಲ್ಲಿ ಮ್ಯಾಚ್ ಗೆಲ್ಲಲು ಬೆವರು ಹರಿಸಬೇಕು, ಯುದ್ಧದಲ್ಲಿ ರಕ್ತ ಹರಿಸಬೇಕು’ ಎಂದಳು ಸುಮಿ.
‘ನಮ್ಮ ದೇಶದಲ್ಲಿ ಯುದ್ಧಗಳು ಬಹಳಷ್ಟು ಆಗಿಹೋಗಿವೆ, ಶತಶತಮಾನಗಳಿಂದ ಲೆಕ್ಕವಿಲ್ಲ ದಷ್ಟು ಯುದ್ಧಗಳು ನಡೆದಿವೆ. ಈಗಿನ ಕ್ರಿಕೆಟ್ ಸ್ಟೇಡಿಯಂಗಳಿಗಿಂತ ಆಗ ಯುದ್ಧಭೂಮಿಗಳ ಸಂಖ್ಯೆ ಜಾಸ್ತಿ ಇತ್ತು. ರಾಜಮಹಾರಾಜರ ರಾಜ್ಯ ವಿಸ್ತರಣೆಗೆ, ವ್ಯಾಜ್ಯ ನಿವಾರಣೆಗೆ ಯುದ್ಧಗಳಾಗು ತ್ತಿದ್ದವು. ಸೈನಿಕರ ರಕ್ತದ ಕೋಡಿ ಹರಿಯುತ್ತಿತ್ತು. ಈ ನೆಲದ ಮಣ್ಣಿನ ಪದರಪದರಗಳಲ್ಲೂ ಯುದ್ಧದ ರಕ್ತದ ಕಲೆ ಇದೆ’.
‘ಸಾವುನೋವಿನ ಯುದ್ಧದ ಸಹವಾಸ ಸಾಕು ಎಂದು ಯುದ್ಧಕ್ಕೆ ಕೈ ಮುಗಿದುಬಿಡಬೇಕು’ ಎಂದಳು ಸುಮಿ.
‘ಮಾತು ಬಿಟ್ಟು ಬೇಗ ತಿಂಡಿ ಮಾಡು ಹೋಗೇ ಸುಮಿ, ನಾನು ಮಾತ್ರೆ ತಗೋಬೇಕು...’ ರೂಮಿನಲ್ಲಿ ಮಲಗಿದ್ದ ಅತ್ತೆ ಕೂಗಿ ರೇಗಿದಳು.
‘ಮಮ್ಮಿ, ಜಗತ್ತಿನಲ್ಲಿ ಶುರುವಾದ ಮೊದಲ ಯುದ್ಧ ಯಾವುದು?’ ಮಗಳು ಕೇಳಿದಳು.
‘ಇನ್ಯಾವುದು, ಅತ್ತೆ–ಸೊಸೆ ಜಗಳ’ ಎಂದು ಹೇಳಿ ಮೂತಿ ತಿರುವಿಕೊಂಡು ಸುಮಿ ಅಡುಗೆ ಮನೆಗೆ ಹೋದಳು.
‘ಜಗತ್ತಿನ ಎಲ್ಲಾ ಯುದ್ಧಗಳು ಮುಗಿದರೂ ಆವೊತ್ತು ಶುರುವಾದ ಅತ್ತೆ, ಸೊಸೆ ಜಗಳ ಮಾತ್ರ ಇವತ್ತಿಗೂ ನಿಂತಿಲ್ಲ...’ ಶಂಕ್ರಿ ಪಿಸುಗುಟ್ಟಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.