ADVERTISEMENT

ಚುರುಮುರಿ | ಪಿಡ್ನಿ ಪಟ್ ಅಂದವೆ

ಲಿಂಗರಾಜು ಡಿ.ಎಸ್
Published 4 ಮೇ 2020, 19:19 IST
Last Updated 4 ಮೇ 2020, 19:19 IST
.
.   

ಈವತ್ತು ವತ್ತಾರೇನೇ ತುರೇಮಣೆ ಮನೇಲಿ ಬಾಡಿನೆಸರಿನ ವಾಸನೆ ಗಿಟುಕರೀತಿತ್ತು. ‘ನಮ್ಮಪ್ಪ ಬಂದವನೆ ಕನೋ. ಅವನಿಗೆ ಬಾಡಿಲ್ಲದಿದ್ರೆ ಬೂವ ಸೇರಕುಲ್ಲ’ ಅಂತಂದ್ರು.

85 ವರ್ಷದ ಅಪ್ಪಾರು ಆಚೆಗೆ ಕಡದು ‘ದೊಡ್ಡೈದ ನನ್ನ ಔಸದಿ ತೀರೋಗದೆ ಕನಾ ಮಗಾ. ಇನ್ನೊಂದು ಬಾಟ್ಲಿ ತಕ್ಕಬಯ್ಯಾ’ ಅಂದ್ರು. ನಾನು ಏನು ಔಷಧಿ ಅಂತ ಕೇಳಿದೆ.

‘ನನ್ನವು ಎರಡೂ ಪಿಡ್ನಿ ಪಟ್ ಅಂದವೆ ಅಂತ ಡಾಕ್ಟ್ರು ಏಳವ್ರೆ ಕಪ್ಪಾ. ಜಲ-ಮಲ ಬಂದಾಗಿದ್ದೋ ಅಂತ ಔಸದಿ ತಕ್ಕತಾ ಇವ್ನಿ’ ಅಂದ್ರು ಅಪ್ಪಾರು. ನನಗೆ ಪಿಡ್ನಿ ಅಂದರೇನು ಅಂತ ಗೊತ್ತಾಗದೇ ಗರಾವು ಹಿಡಿದಂಗಾಯ್ತು!

ADVERTISEMENT

‘ನಮ್ಮಪ್ಪನಿಗೆ ಡಾಕ್ಟ್ರು ಎರಡೂ ಕಿಡ್ನಿ ವೀಕಾಗವೆ ಅಂದವ್ರೆ. ಕಿಡ್ನಿಯ ಇವನು ಪಿಡ್ನಿ ಅಂತಾವನೆ. ಅಪ್ಪನಿಗೆ ರಾತ್ರಿ ನಿದ್ದೆ ಹತ್ತದೆಲೆ ಎಲ್ಲಾರ್ನೂ ಏಳಿಸಿ ಕೊರೊನಾ ಜರ ಬಂದವಾ ನೋಡು, ನಮ್ಮವ್ವ ಕರೀತಾವಳೆ ನಾನು ಹೋಯ್ತಿನಿ ಅಂತ ರೋಸತಿದ್ದನಂತೆ.

ಮನ್ನೆ ಊರಿಗೋಗಿದ್ದಾಗ ‘ರಾತ್ರೆಲ್ಲಾ ಎದ್ದು ಓಡೋಯ್ತನೆ. ಡಾಕ್ಟ್ರು ನಿದ್ದೆ ಮಾತ್ರೆ ಕೊಡ್ನಿಲ್ಲ. ಏನಾದ್ರು ಮಾಡು’ ಅಂದ್ರು. ನಾನು ನೋಡನ ಅಂತ ‘ಪಾರಿನ್ ಔಸದಿ ಕನಪ್ಪೋ, ಪಿಡ್ನಿ ಸರಿಯಾಯ್ತದೆ, ಚೆನ್ನಾಗಿ ನಿದ್ದೆ ಬತ್ತದೆ ತಗಾ’ ಅಂತ ಒಂದು ಮಿಳ್ಳೆ ಹೂದು ಕೊಟ್ಟೆ. ಭಾರಿ ಕಯ್ಯಿ ವಿಸ ಕನೋ ಅಂತ ಕುಡ್ದು ಮಲಗಿದೋನು ಬೆಳಗ್ಗೆ ಎದ್ದಾಗ ಹತ್ತು ಗಂಟೆ. ದಿನಾ ರಾತ್ರಿ ಒಂದು ಮಿಳ್ಳೆ ಕುಡುದು ದೇವರಾಗಿ ಮನಿಕಬುಡ್ತನಂತೆ. ತುರ್ತಾಗಿ ಒಂದು ಬಾಟ್ಲಿ ಔಷದಿ ಬೇಕಾಗದಲ್ಲೋ’ ಅಂದ್ರು. ಅಪ್ಪ-ಮಕ್ಕಳ ಅನುಬಂಧ ನೋಡಿ ನಾನು ಲಾಕ್‍ಡೌನ್ ಥರಾ ಕರಗೋದೆ.

‘ಅದೇನು ಔಸದಿ ಕನೇಳಿ ಸಾ, ಭಿಕ್ಷೆ ಬೇಡಿಯಾದ್ರೂ ನಾನು ತಂದುಕೊಟ್ಟೇನು’ ಅಂತಂದೆ. ‘ನಮ್ಮಪ್ಪನಿಗೆ ನಾನು ಕೊಟ್ಟುದ್ದು ತ್ರಿಬ್ಬಲ್ ಎಕ್ಸ್ ರಮ್ಮು ಕನೋ!’ ಅಂದ ತುರೇಮಣೆಯ ತೀರ್ಥರೂಪು ಮದ್ಯಂತರಿ ಮೆಡಿಸಿನ್ ನೋಡಿ ನನ್ನ ತಲೆ ಪಾದರಾಯನಪುರ ಆಗ್ಯದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.