‘ಮಂಜಮ್ಮ, ಈ ಜಗತ್ತಲ್ಲಿ ಯಾರಿಗೆ ತಾಳ್ಮೆ ಹೆಚ್ಚು?’
ಹರಟೆಕಟ್ಟೆಯಲ್ಲಿ ಗುಡ್ಡೆ ಚಾ ಕುಡಿಯುತ್ತ ಕೇಳಿದ.
‘ಇನ್ಯಾರಿಗೆ, ತಾಯಿಗೆ ಅಥ್ವ ಭೂಮಿ ತಾಯಿಗೆ...’ ಮಂಜಮ್ಮ ಹೇಳಿದಳು.
‘ಅಲ್ಲ...’
‘ಗಂಡಿಗೆ ಹೆಚ್ಚು ತಾಳ್ಮೆ ಕಣಲೆ, ಐಮೀನ್ ಹೆಂಡ್ತಿ ಮುಂದೆ ಪಿಟಿಕ್ಕನ್ನದ ಗಂಡ ಅನ್ನೋ ಗಂಡಿಗೆ...’ ದುಬ್ಬೀರ ಹೇಳಿದ.
‘ಅದೂ ಅಲ್ಲ...’
‘ನನ್ ಪ್ರಕಾರ ಈ ಮಂಜಮ್ಮನಂಥ ಹೆಣ್ಮಕ್ಕಳಿಗೆ ಸೀರೆ ತೋರಿಸ್ತಾನಲ್ಲ, ಸೀರೆ ಅಂಗಡಿ ಸೇಲ್ಸ್ ಮನ್... ಅವನಿಗೆ ತಾಳ್ಮೆ ಹೆಚ್ಚು...’ ಕೊಟ್ರೇಶಿ ನಕ್ಕ.
‘ನೋ ಚಾನ್ಸ್... ಅದ್ಯಾವುದೂ ಅಲ್ಲ. ಬಂಡೆಗೆ ತಾಳ್ಮೆ ಹೆಚ್ಚು...’
‘ಬಂಡೆಗಾ? ಅದೆಂಗೆ?’
‘ಹೆಂಗೆ ಅಂದ್ರೆ ಬಂಡೆ ತನ್ನ ಪಾಡಿಗೆ ತಾನು ಗುಡ್ಡದ ಮೇಲಿರುತ್ತೆ. ಹೊತ್ಕಂಡ್ ಬಂದು ಒಡೆದ್ರೆ ಚಪ್ಪಡಿ, ಸೈಜುಗಲ್ಲು, ಜಲ್ಲಿಕಲ್ಲು, ದೇವಸ್ಥಾನದ ಮೆಟ್ಟಿಲು ಆಗುತ್ತೆ. ತುಳಿದ್ರೆ ತುಳಿಸ್ಕಳುತ್ತೆ, ಕೆತ್ತಿದ್ರೆ ಕೆತ್ತಿಸ್ಕೊಳುತ್ತೆ. ಏನ್ ಮಾಡಿದ್ರೂ ಸಹಿಸ್ಕೊಳುತ್ತೆ...’
‘ನಮ್ಮೂರ ‘ಬಂಡೆ’ಗೆ ಅದಕ್ಕಿಂತ ತಾಳ್ಮೆ ಜಾಸ್ತಿ’ ಎಂದ ತೆಪರೇಸಿ.
‘ಹೌದಾ? ಅದೆಂಥದು?’
‘ನಮ್ಮೂರ ಬಂಡೆ ಮಾತಾಡುತ್ತೆ, ನೋಡೋಕೆ ಒರಟೊರಟಾಗಿದ್ರು ಶ್ಲೋಕ ಹೇಳುತ್ತೆ. ಕಂಡ ಕಂಡ ದೇವರಿಗೆಲ್ಲ ಕೈ ಮುಗಿದು ಕಾಯಿ ಒಡೆಯುತ್ತೆ. ಕುರ್ಚಿ ಬಿಟ್ಕೊಡಲ್ಲ ಅಂದ್ರೂ ಇರೋ ಕುರ್ಚಿ ಕಿತ್ಕಂತೀವಿ ಅಂದ್ರೂ ಸಹಿಸ್ಕಳುತ್ತೆ. ಪ್ರಯತ್ನಕ್ಕಿಂತ ಪ್ರಾರ್ಥನೆ ಫಲ ಕೊಡುತ್ತೆ ಅನ್ನುತ್ತೆ. ಸಮಾರಂಭದಲ್ಲಿ ಸ್ವಾಗತ ಮಾಡದಿದ್ರೂ ಸುಮ್ನಿರುತ್ತೆ. ನಿಮಗೆ ಜಾಸ್ತಿ ಬೆಂಬಲ ಇಲ್ಲ ಅಂದ್ರೂ ನಗ್ತಿರುತ್ತೆ, ವಿರೋಧಿಸಿದವರಿಗೆಲ್ಲ ಒಳ್ಳೆದಾಗ್ಲಿ ಅನ್ನುತ್ತೆ...’
‘ಗೊತ್ತಾತು ಬಿಡು, ಒಂದೊಂದ್ ಸಲ ಸಿಟ್ಟು ಬಂದ್ರೆ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅನ್ನುತ್ತೆ ಅಲ್ವಾ?’
ಗುಡ್ಡೆಯ ಕಿಲಾಡಿ ಮಾತಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.