ADVERTISEMENT

ಡೈರೆಕ್ಟರ್ ಯಾರು?

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
..
..   

‘ರೀ, ನ್ಯೂಸ್ ಚಾನೆಲ್‍ಗಳಲ್ಲಿ ಸರ್ಕಾರಿ ಸೀರಿಯಲ್ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಒಂದೊಂದು ಎಪಿಸೋಡೂ ಕುತೂಹಲ ಮೂಡಿಸುತ್ತಿದೆ’ ಟಿ.ವಿ ನೋಡುತ್ತಿದ್ದ ಸುಮಿ ರೋಮಾಂಚನಗೊಂಡಳು.

‘ಅಭಿನಯದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ’ ಗಂಡ ಶಂಕ್ರಿ ಮೆಚ್ಚುಗೆ ಸೂಚಿಸಿದ.

‘ಮನೆ ಯಜಮಾನನ ಪಾತ್ರದಲ್ಲಿ ಕುಮಾರಸ್ವಾಮಿಯವರದು ಮನೋಜ್ಞ ಅಭಿನಯ. ಸೋದರ ಸಂಬಂಧಿ ಪಾತ್ರದಲ್ಲಿ ಸಿದ್ದರಾಮಯ್ಯ ಕೂಡಾ ಸನ್ನಿವೇಶಕ್ಕೆ ತಕ್ಕಂತೆ ಗಮನಾರ್ಹವಾಗಿ ಅಭಿನಯಿಸುತ್ತಿದ್ದಾರೆ. ಮನೆಯ ಹಿರಿಯರಾಗಿ ದೇವೇಗೌಡರದು ತಾಳ್ಮೆ, ಸಹನೆಯ ಸಹಜಾಭಿನಯ. ಅವರಲ್ಲಿನ ಕಲೆ ವೀಕ್ಷಕರನ್ನು ತಲೆದೂಗುವಂತೆ ಮಾಡುತ್ತದೆ’ ಅಂದಳು ಸುಮಿ.

ADVERTISEMENT

‘ಪಕ್ಕದ ಮನೆ ಯಜಮಾನನ ಕ್ಯಾರೆಕ್ಟರ್‌ನಲ್ಲಿ ಯಡಿಯೂರಪ್ಪರ ಆ್ಯಕ್ಟಿಂಗ್ ಅಮೋಘ. ದಿಲ್ಲಿಯ ಪಿತೃಗಳ ವಾಕ್ಯ ಪರಿಪಾಲಕರಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಮುನಿಸಿಕೊಂಡು ಮನೆ ಬಿಟ್ಟು ಹೋಗಿರುವ ಸಹೋದರರು ಸೀರಿಯಲ್‍ನ ಆಕರ್ಷಣೆ. ಅವರ ಪಾತ್ರ ಪೋಷಣೆ, ಹೇಳುವ ಸಂಭಾಷಣೆ ಸೀರಿಯಲ್‍ಗೆ ಘನತೆ ತಂದುಕೊಟ್ಟಿದೆ. ಮನವೊಲಿಸಿ ಅವರನ್ನು ವಾಪಸ್ ಮನೆಗೆ ಕರೆತರುವ ಪಾತ್ರದಲ್ಲಿ ಡಿ.ಕೆ.ಶಿವಕುಮಾರ್ ಅದ್ಭುತವಾಗಿ ನಟಿಸಿದರು’.

‘ಒಡೆದ ಕುಟುಂಬವನ್ನು ಒಂದು ಮಾಡಲು ಧರ್ಮಚಿಂತಕ ರೇವಣ್ಣನವರು ಮಾಡುತ್ತಿರುವ ಪೂಜೆ ಪುನಸ್ಕಾರ, ಚಪ್ಪಲಿರಹಿತ ಸೇವೆ ಮನ ಕಲಕುತ್ತದೆ. ಇತರ ಚಾನೆಲ್‍ಗಳಲ್ಲಿ ಅರ್ಧ ಗಂಟೆಗೇ ಎಪಿಸೋಡ್ ಮುಗಿಸುತ್ತಾರೆ. ನ್ಯೂಸ್ ಚಾನೆಲ್‍ನವರು ಸರ್ಕಾರಿ ಸೀರಿಯಲ್ ಅನ್ನು ದಿನಪೂರ್ತಿ ಪ್ರಸಾರ ಮಾಡುತ್ತಾ ವೀಕ್ಷಕರ ಮನ ಗೆದ್ದಿದ್ದಾರೆ, ಟಿಆರ್‌ಪಿಯನ್ನೂ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ’.

‘ಆದರೆ, ಈ ಸೀರಿಯಲ್‍ನ ಡೈರೆಕ್ಟರ್ ಯಾರು ಅಂತ ತೋರಿಸುತ್ತಿಲ್ಲರೀ...’ ಸುಮಿಗೆ ಕುತೂಹಲ.

‘ಸೀರಿಯಲ್ ಕಂಪ್ಲೀಟ್ ಆದರೂ ತೋರಿಸೋಲ್ಲ. ವೀಕ್ಷಕರೇ ಗೆಸ್ ಮಾಡಿ ಚಾನೆಲ್‍ನವರಿಗೆ ತಿಳಿಸಬೇಕು. ಸರಿ ಉತ್ತರ ಕಳಿಸಿದವರಿಗೆ ಚಾನೆಲ್‍ನವರು ಸೂಕ್ತ ಬಹುಮಾನ ಕೊಡ್ತಾರೆ’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.