ADVERTISEMENT

ಚುರುಮುರಿ | ಸೊನ್ನೆ ಸಂಪಾದನೆ!

ಬಿ.ಎನ್.ಮಲ್ಲೇಶ್
Published 30 ಜುಲೈ 2020, 21:14 IST
Last Updated 30 ಜುಲೈ 2020, 21:14 IST
ಚುರುಮುರಿ
ಚುರುಮುರಿ   

‘ಯಾಕೋ ಬೇಜಾರು ಕಣಲೆ ಗುಡ್ಡೆ, ಒಂದು ಕತೆ ಹೇಳು’ ಎಂದ ದುಬ್ಬೀರ.

‘ಆತು, ಆದ್ರೆ ಎಲ್ರಿಗೂ ಚಾ ಕುಡಿಸ್ಬೇಕು’ ಎಂದು ಷರತ್ತು ಹಾಕಿದ ಗುಡ್ಡೆ, ‘ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಅಲ್ಲಿ ಒಂದ್ಸಲ ‘ಮರೊನಾ’ ಅಂತ ಒಂದು ಕಾಯಿಲೆ ಬಂತಂತೆ’ ಅಂದ.

‘ಮರೊನಾನ? ಕೊರೊನಾ ಅಲ್ವ?’ ತೆಪರೇಸಿ ತಿದ್ದಿದ.‌

ADVERTISEMENT

‘ಅಲ್ಲ, ಇದು ಬೇರೆ. ಹೆಸರು ಮರೊನಾ, ಆದ್ರೆ ಸಾಯೋದು ಕಡಿಮೆ. ಆ ಕಾಯಿಲೆ ನಿಯಂತ್ರಣಕ್ಕೆ ರಾಜ ನಾಲ್ವರು ಮಂತ್ರಿಗಳನ್ನ ನೇಮಕ ಮಾಡಿದ್ನಂತೆ. ಆ ನಾಲ್ಕೂ ಜನ ಮಂತ್ರಿಗಳು ನಾಲ್ಕೇ ತಿಂಗಳಲ್ಲಿ ಕೋಟಿ ಕೋಟಿ ದುಡ್ಡು ದುಡಿದು ಗುಡ್ಡೆ ಹಾಕಿದ್ರಂತೆ...’

‘ಅಂದ್ರೇ, ಕಾಯಿಲೆ ಹೆಸರಲ್ಲಿ ದುಡ್ಡು ಹೊಡೆದಿರಬೇಕು...’ ದುಬ್ಬೀರ ಗೆಸ್ ಮಾಡಿದ.

‘ಅದ್ನೇ ಹೇಳ್ತಿದೀನಿ ಸ್ವಲ್ಪ ತಡ್ಕಾ’ ಎಂದ ಗುಡ್ಡೆ, ‘ಒಂದಿನ ಆ ನಾಲ್ಕೂ ಜನ ಒಂದ್ ಕಡೆ ಸೇರಿ, ತಾವು ಹೆಂಗೆಂಗೆ ದುಡ್ಡು ಮಾಡಿದ್ವಿ ಅಂತ ತಮ್ಮ ಬುದ್ಧಿವಂತಿಕೆ ಕೊಚ್ಕಂಡ್ರಂತೆ. ಒಬ್ಬ ಹೇಳಿದ್ನಂತೆ ‘ನೋಡ್ರಯ್ಯ ನಾನು ‘ಮರಂಟೈನ್’
ನಲ್ಲಿದ್ದೋರಿಗೆ ಜುಜುಬಿ ಚಿತ್ರಾನ್ನ, ಪಲಾವ್ ಕೊಟ್ಟು ಕೋಟ್ಯಂತರ ದುಡ್ಡು ಮಾಡಿದೆ’ ಅಂದನಂತೆ. ಎರಡನೆಯೋನು ‘ನಾನು ಮಾಸ್ಕು, ಸ್ಯಾನಿಟೈಸರು, ವೆಂಟಿಲೇಟರಲ್ಲಿ ಒಳ್ಳೆ ದುಡ್ಡು ಮಾಡಿದೆ’ ಎಂದರೆ, ಮೂರನೆಯವನು ‘ನಾನೇ ಬುದ್ಧಿವಂತ, ಏನೂ ಖರ್ಚಿಲ್ಲದೆ ಊರ ತುಂಬ ಸೊಳ್ಳೆ ಓಡ್ಸೋ ಹೊಗೆ ಹಾಕಿ ಕೋಟ್ಯಂತರ ದುಡ್ಡು ಮಾಡಿದೆ’ ಅಂದನಂತೆ.

‘ಮತ್ತೆ ಕೊನೆಯವನು?’ ದುಬ್ಬೀರನಿಗೆ ಕುತೂಹಲ.

ಅವನು ‘ನಾನೇನೂ ಮಾಡ್ಲಿಲ್ಲಪ್ಪ, ನಂದು ಲೆಕ್ಕದ ಖಾತೆ, ಸೊನ್ನೆ ಸಂಪಾದನೆ’ ಅಂದನಂತೆ.

‘ಶೂನ್ಯ ಸಂಪಾದನೆ ಅನ್ನೋದು ಕೇಳಿದ್ದೆ. ಇದ್ಯಾವುದು ಸೊನ್ನೆ ಸಂಪಾದನೆ?’

‘ಮೇಲಿನ ಮೂರೂ ಜನ ಕೊಟ್ಟ ಲೆಕ್ಕಕ್ಕೆ ಇವನು ಒಂದೊಂದು ಸೊನ್ನೆ ಸೇರಿಸಿ ಕೋಟ್ಯಂತರ ದುಡ್ಡು ಮಾಡಿದ್ನಂತೆ!’ ಗುಡ್ಡೆ ಕತೆ ಮುಗಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.