ಚುರುಮುರಿ
‘ನಮ್ಮ ‘ಅಬ್ಬಬ್ಬಾ... ಹಬ್ಬ!’ ಕಾರ್ಯಕ್ರಮದಲ್ಲಿ ನಿಮ್ಮ ಮನೆಯ ಹಬ್ಬದ ಆಚರಣೆಯನ್ನು ಅರ್ಧ ಗಂಟೆ ಎಪಿಸೋಡ್ ಮಾಡಿ ಜಗತ್ತಿಗೆ ತೋರಿಸ್ತೀವಿ, ಅದ್ದೂರಿ ಸಿದ್ಧತೆ ಮಾಡಿಕೊಳ್ಳಿ’ ಎಂದು ಚಾನೆಲ್‌ನವರು ಫೋನ್ ಮಾಡಿದ್ದರು. ಸುಮಿ ಹಿಗ್ಗಿ ಹೋಗಿದ್ದಳು.
ಟೀವಿಯವರ ಪ್ರಶ್ನೆಗಳಿಗೆ ವೈರಲ್ ಆಗೋ ಉತ್ತರ ಕೊಡಬೇಕು ಎಂದು ಗಂಡ, ಮಕ್ಕಳಿಗೆ ಹೇಳಿದ್ದಳು. ಗಂಡನ ಮೀಸೆ, ತಲೆಗೂದಲಿಗೆ ಹೇರ್ ಡೈ ಹಚ್ಚಿ ತನ್ನ ಏಜಿಗೆ ಮ್ಯಾಚ್ ಮಾಡಿಕೊಂಡಿದ್ದಳು.
ರೂಮಿನಿಂದ ಇಲಿಯೊಂದು ಓಡಿಬಂತು.
‘ಗಣೇಶನ ವಾಹನ ಇಲಿ ಹಬ್ಬಕ್ಕೆ ಬಂದಿದೆ, ಅದನ್ನು ಹೊಡೆಯೋದಾಗಲಿ, ಓಡಿಸೋದಾಗಲಿ ಮಾಡಬೇಡಿ’ ಅಂದಳು ಸುಮಿ.
‘ಡ್ಯಾಡಿ, ಇಲಿ ನನ್ನ ಟೆಕ್ಸ್ಟ್ ಬುಕ್ ಕಚ್ಚಿ ತಿಂದಿದೆ’ ಎಂದು ಮಗಳು ಗಾಬರಿಯಾದಳು.
‘ಹಸಿವಾಗಿತ್ತೇನೋ ಪಾಪ! ಹೊಸದು ಕೊಡಿಸ್ತೀನಿ ಬಿಡು’ ಅಂದ ಶಂಕ್ರಿ.
‘ರೀ, ಈ ಇಲಿ ಗಂಡೋ ಹೆಣ್ಣೊ?’
‘ಗಂಡೇ ಇರಬೇಕು, ಹೆಣ್ಣಾಗಿದ್ದರೆ ನಿನ್ನ ರೇಷ್ಮೆ ಸೀರೆಗೆ ಬಾಯಿ ಹಾಕ್ತಿತ್ತು’.
ಆಗ ಚಾನೆಲ್ ಮೇಡಂ ಫೋನ್ ಮಾಡಿ, ‘ನಮ್ಮ ಟೀಮ್ ಬರ್ತಿದೆ, ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದೀರಾ? ನೆರೆಹೊರೆ ಹೆಂಗಸರನ್ನೂ ಕರೆಯಿರಿ, ಎಲ್ಲರೂ ಹಬ್ಬದ ಅಲಂಕಾರದಲ್ಲಿ ಇರಬೇಕು’ ಎಂದರು.
‘ಮೇಡಂ, ನಮ್ಮ ಮನೆಗೆ ಇಲಿ ಬಂದಿದೆ. ಹಬ್ಬದ ದಿನ ಇಲಿ ಬಂದರೆ ಶುಭಾ ಅಲ್ವಾ?’ ಸುಮಿ ಹೇಳಿದಳು.
‘ಹೌದೂರೀ, ಗಣೇಶನ ವಾಹನ ಜೀವಂತವಾಗಿ ಬಂದಿದೆಯೆಂದರೆ ವಿಶೇಷವೇ. ಇಲಿ ಕೈಗೆ ಸಿಕ್ಕಿದರೆ ಹಿಡಿದು ಸ್ನಾನ ಮಾಡಿಸಿ ಮೇಕಪ್ ಮಾಡಿ, ಅದನ್ನೂ ಶೂಟ್ ಮಾಡ್ತೀವಿ’ ಎಂದಳು.
ಸುಮಿ ಖುಷಿಯಾದಳು. ‘ರೀ, ಇಲಿ ಆಚೆ ಹೋಗದಂತೆ ನೋಡಿಕೊಳ್ಳಿ. ಬೆಕ್ಕು, ನಾಯಿಗಳು ಮನೆಗೆ ನುಗ್ಗಿ ಇಲಿಗೆ ಬಾಯಿ ಹಾಕದಂತೆ ಕಾವಲಾಗಿರಿ...’ ಎಂದು ಎಲ್ಲರಿಗೂ ಕರ್ತವ್ಯಗಳನ್ನು ಹಂಚಿ ಮೊಬೈಲ್‌ನಲ್ಲಿ ಇಲಿಯ ಫೋಟೊ ಕ್ಲಿಕ್ಕಿಸಿಕೊಂಡಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.