ADVERTISEMENT

ಚುರುಮುರಿ: ಪಂಚಾಯಿತಿ ಪರೀಕ್ಷೆ

ಮಣ್ಣೆ ರಾಜು
Published 9 ಡಿಸೆಂಬರ್ 2020, 19:30 IST
Last Updated 9 ಡಿಸೆಂಬರ್ 2020, 19:30 IST
ಚುರುಮುರಿ
ಚುರುಮುರಿ   

‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೀನಿ’ ಹೆಂಡ್ತಿಗೆ ಹೇಳಿದ ಶಂಕ್ರಿ.

‘ಬೇಡರೀ, ಹೋದ ಎಲೆಕ್ಷನ್ ಖರ್ಚಿಗೆ ನನ್ನ ಒಡವೆ ಮಾರಿದ್ರಿ, ಈಗ ಉಳಿದಿರೋ ನನ್ನನ್ನೂ ಮಾರಿಬಿಡ್ತಿರೇನು...?’ ಸುಮಿಗೆ ಸಿಟ್ಟು ಬಂತು.

‘ಹೆಂಡ್ತಿ ಮಾರಿ ಸತ್ಯ ಹರಿಶ್ಚಂದ್ರನಾಗೊಲ್ಲ, ಗೆದ್ದು ಮೆಂಬರ್ ಆಗ್ತೀನಿ, ಆಮೇಲೆ ಪ್ರೆಸಿಡೆಂಟ್ ಆಗ್ತೀನಿ’.

ADVERTISEMENT

ಅಷ್ಟೊತ್ತಿಗೆ ಗುಂಪು ಬಂದಿತು, ‘ಆ್ಯನ್ಯುಯಲ್ ಪರೀಕ್ಷೆ ಫೇಲಾದ್ರೆ ಸಪ್ಲಿಮೆಂಟರಿ ಕಟ್ಟಬೇಕು, ಶಂಕ್ರಿ ಅಣ್ಣನ್ನ ನಾವು ಎಲೆಕ್ಷನ್‌ನಲ್ಲಿ ಗೆಲ್ಲಿಸ್ತೀವಿ’ ಅಂದರು.

‘ಹಾಗಂತ, ಬರೀ ಕೈಯಲ್ಲಿ ಎಲೆಕ್ಷನ್ ಮಾಡಕ್ಕಾಗುತ್ತಾ?’ ಅಂದಳು ಸುಮಿ.‌

‘ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕ್ಯಾಂಡಿಡೇಟ್‍ಗಳು ಕೈ ತುಂಬಾ ಕೊಟ್ಟು ಜನರ ಮನಸು ಕೆಡಿಸಿ, ವ್ಯವಸ್ಥೆ ಹಾಳು ಮಾಡಿದ್ದಾರೆ. ನಾವು ಮತ ಕೇಳಲು ಹೋದ್ರೆ ಜನ ಕೈ-ಬಾಯಿ ನೋಡ್ತಾರೆ’ ಅಂದ ಒಬ್ಬ.

‘ಎದುರಾಳಿ ಕ್ಯಾಂಡಿಡೇಟು ತಿಪ್ಪೇಶಿ ಹೋದ ತಿಂಗಳು ಮಕ್ಕಳ ಬರ್ತ್‌ಡೇ ನೆಪದಲ್ಲಿ ಊರವರಿಗೆ ಬಾಡೂಟ ಹಾಕಿಸಿ, ಗಂಡಸರಿಗೆ ರೇಷ್ಮೆ ಷರ್ಟು, ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ಹಂಚಿದ್ದ. ನೀವು ಬೆಳ್ಳಿ ನಾಣ್ಯನೋ ಚಿನ್ನದ ಚೂರನ್ನೋ ಕೊಡಬೇಕಾಗುತ್ತದೆ’ ಅಂದ ಮತ್ತೊಬ್ಬ.

‘ಎಲೆಕ್ಷನ್ ಅಧಿಕಾರಿಗಳಿಗೆ ಗೊತ್ತಾದ್ರೆ ಬಂದು ಎಲ್ಲಾ ಬಾಚಿಕೊಂಡುಹೋಗಿ, ಕೇಸ್ ಹಾಕ್ತಾರೆ’ ಎಂದ ಇನ್ನೊಬ್ಬ.

‘ಆದ್ರೂ ಎಲೆಕ್ಷನ್ ಖರ್ಚಿಗೆ ದುಡ್ಡು ಬೇಕಲ್ಲ, ದುಡ್ಡಿಗೆ ಏನು ಮಾಡೋದು?’ ಶಂಕ್ರಿಗೆ ಚಿಂತೆಯಾಯ್ತು.

‘ಒಳ್ಳೆ ರೇಟ್ ಕೊಡುಸ್ತೀನಿ ಹೊಲ ಮಾರಿಬಿಡಿ. ಗೆದ್ದು ಮೆಂಬರ್ ಆಗಿ, ದೇವರು ಕಣ್ಣುಬಿಟ್ರೆ ಹತ್ತಾರು ಎಕರೆ ಕೊಳ್ಳಬಹುದು’ ಎಂದು ಆಸೆ ಚಿಗುರಿಸಿ ಹೋದರು.

ನಂತರ, ಪಕ್ಕದ ಮನೆ ಪದ್ಮಾ ಬಂದು, ‘ಈಗ ಬಂದಿದ್ದವರು ಏನು ಹೇಳಿದ್ರು? ಮನೆಹಾಳರು, ಕಮಿಷನ್ ಆಸೆಗೆ ಈಗಾಗಲೇ ನಾಲ್ಕು ಜನರ ಹೊಲ ಮಾರಿಸಿಬಿಟ್ಟಿದ್ದಾರೆ, ನೀವು ಹುಷಾರು’ ಎಂದು ಎಚ್ಚರಿಸಿದಾಗ, ಶಂಕ್ರಿ, ಸುಮಿ ದಂಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.