ADVERTISEMENT

ಚುರುಮುರಿ: ಮುಡಿ ಕೊಟ್ಟಾರಂತೆ

ಲಿಂಗರಾಜು ಡಿ.ಎಸ್
Published 21 ಸೆಪ್ಟೆಂಬರ್ 2020, 19:31 IST
Last Updated 21 ಸೆಪ್ಟೆಂಬರ್ 2020, 19:31 IST
   

ನಾನೂ ತುರೇಮಣೆ ಇದಾನಸೌದದ ಸುತ್ತಾ ಅಲೀತಿದ್ದೊ. ಕೆಂಗಲ್ ಪ್ರತಿಮೆ ತಾವು ಡಜನ್‍ಗಟ್ಟಲೇ ಸಾಸಕರು ಸೇರಿಕ್ಯಂಡು ‘ನಾನು ಸಂವಿಧಾನದ ವಿಧಿದ್ವಾರಾ ಸ್ಥಾಪಿತವಾದ ಕರ್ನಾಟಕ ರಾಜ್ಯದ ಸಚಿವನಾಗಿ’ ಅಂತ ಒಂದೇ ಸಮನೆ ಉರುವಡೀತಿದ್ರು. ಇನ್ನೊಬ್ರು ‘ನಾನು ಮಂತ್ರಿ ಆಯ್ತಿನಾ, ಇಲ್ಲವಾ’ ಅಂತ ಒಂದೊಂದೇ ತಲೆಕೂದಲು ಕಿತ್ತು ಎಡಕೆ-ಬಲಕೆ ಹಾಕತಿದ್ರು. ‘ಸಾ, ರಾಜಾವುಲಿ ಸಂಪುಟದ ಆಕಾಂಕ್ಷಿಗಳೆಲ್ಲಾ ಇಲ್ಲೇನೋ ತರದೂದು ಮಾಡ್ತಾವ್ರೆ?’ ಅಂದೆ.

‘ಅಲ್ಲೋ ರಾಜಾವುಲಿ ಪಟ್ಟಿ ಇಡಕಂದು ಯೆಡ್‍ಮಾಸ್ಟ್ರು ತಕ್ಕೋಗಿ ‘ಯಾಪಿ ಬರ್ತ್‌ಡೇ ಸಾ’ ಅಂದ್ರೆ ಅವರು ‘ದೋ ಗಜ್ ಕಿ ದೂರ್ ರಹೋ ರಾಜಾವುಲಿ’ ಅಂತ ಪೋನ್ ನಂಬರ್ ಕೊಟ್ಟು ಕಡದೋದ್ರಂತಪ್ಪ’ ಅಂದ್ರು ತುರೇಮಣೆ.

‘ಅಂದ್ರೆ ಇನ್ನೂ ಮಂತ್ರಿ ಯೇಗ ಇಲ್ಲ ಅನ್ನಿ! ನಮ್ಮ ರೇಣುಕಣ್ಣದೆ ಬನ್ನಿ ಮಾತಾಡಿಸಮು’ ಅಂತ ಅವರ ತಕ್ಕೋಗಿ ನಮಸ್ಕಾರ ಸಾ ಅಂದೋ.

ADVERTISEMENT

‘ನಾನೇನೂ ಲಾಬಿ ಮಾಡ್ತಿಲ್ಲ. ಶಿವಮೊಗ್ಗ ಶೀಯಂ ನನ್ನ ಮಂತ್ರಿ ಮಾಡೇ ಮಾಡತರೆ’ ಅಂತಂದ್ರು. ಮಧ್ಯೆ ಬಾಯಾಕಿದ ಹಕ್ಕಿ ‘ವೈಕಮಾಂಡ್ ಮುಂದೆ ಬೇಡಿಕೆ ಮಡಗಿದ್ದೀನಿ. ನನ್ನ ಹಕ್ಕಿನ ಸ್ಥಾನ ನನಗೇ! ಹಕ್ಕಿಯು ಹಾರುತಿದೇ!’ ಅಂದ್ರೆ ನಾಗಣ್ಣ ಬುಸ್ ಅಂತು.

‘ನಾನಂತು ಮಂತ್ರಿ ಗ್ಯಾರೆಂಟಿ. ಪ್ರಮಾಣವಚನ ಎಷ್ಟು ಗಟ್ ಮಾಡಿವ್ನಿ ಅಂದ್ರೆ, ತೇಗಿದರೆ ಬಾಯಿಗೆ ಬತ್ತದೆ. ಮಂತ್ರಿಯಾದ್ರೆ ಮುಡಿಕೊಡತೀನಿ ಅಂತ ಹರಕೆನೂ ಹೊತುಗಂಡಿದ್ದೀನಿ’ ಅಂದ್ರು ಮಾಸ್ಕಾಕಿಕೊಂಡಿದ್ದೋರು.

‘ಯಣ್ಣಾ ಯಂತಾ ದೈವಭಕ್ತಿ ನಿಮ್ಮದು! ತಲೆಬೋಳಿಸಿಕ್ಯಣದು ಮೌಢ್ಯ ಅಲ್ಲುವರಾ?’ ಅಂದ್ರು ತುರೇಮಣೆ.

‘ಅಲ್ರೀ ನನ್ನ ತಲೆ ಬೋಳಿಸಿಕ್ಯತಿನಿ ಅಂದ್ನಾ! ನಮ್ಮ ಮುಂದ್ಲ ಮನೆ ಯೆಂಟಪ್ಪಣ್ಣನ ತಲೆ ಬೋಳಿಸ್ತೀನಿ ಅಂದುದ್ದು. ಬೋಳಿಸದು ಮುಖ್ಯ. ಯಾರ ತಲೆ ಅನ್ನದಲ್ಲ’ ಅಂತ ತಲೆ ಸವರಿಕ್ಯಂಡರು. ಅಷ್ಟರಲ್ಲಿ ‘ಸಂಪುಟ ವಿಸ್ತರಣೆ ಇಲ್ಲವಂತೆ ಎಲ್ಲಾ ಮನೆಗೋಗಿ’ ಅಂತ ಯಾರೋ ಮೂರನೇ ಮಹಡಿಯಿಂದ ಸಾರಣೆ ಮಾಡಿದಾಗ ಆಕಾಂಕ್ಷಿಗಳೆಲ್ಲಾ ಬೇಜಾರಲ್ಲಿ ಬಿಕ್ಕತೊಡಗಿದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.