ADVERTISEMENT

ಚುರುಮುರಿ | ಕೋಟ್ಯಧೀಶರ ನಾಡಿನಲ್ಲಿ...

ಸುಮಂಗಲಾ
Published 17 ಅಕ್ಟೋಬರ್ 2022, 22:45 IST
Last Updated 17 ಅಕ್ಟೋಬರ್ 2022, 22:45 IST
   

ಬೆಕ್ಕಣ್ಣ ತನ್ನ ಹಿಂಗಾಲಿನ ಪಂಜಗಳಿಗೆ ಅಂಟಿದ ದೂಳನ್ನು ಭಾರಿ ಸೂಕ್ಷ್ಮವಾಗಿ, ಹಲ್ಲುಜ್ಜುವ ಬ್ರಶ್‌ನಿಂದ ಕೆರೆದು ತೆಗೆದು ಪೇಪರಿನ ಮೇಲೆ ಹಾಕಿತು. ಆಮೇಲೆ ಅದನ್ನು ಒಂದು ಚಿಕ್ಕ ಸ್ಟೀಲಿನ ಕರಡಿಗೆಯಲ್ಲಿ ಹಾಕಿತು. ‘ಇದನ್ನ ಲಾಕರಿನಲ್ಲಿ ಜೋಪಾನವಾಗಿ ಇಡು’ ಎಂದು ಅಪ್ಪಣೆ ಮಾಡಿತು! ನಾನು ಕಕಮಕ ಮುಖ ನೋಡಿದೆ.

‘ಮುಂದೆ ನಾ ನಮ್ಮ ಮಾರ್ಜಾಲಗಳ ಸಿಎಮ್ಮೋ, ಪ್ರಧಾನಿಯೋ ಆಗತೀನಿ. ಮಂದಿ ಸುಮ್ ಸುಮ್ನೆ ಬೇರೆಯವ್ರ ಪಾದದೂಳಿಗೆ ನನ್ನ ಪಾದದೂಳಿಯ ಹೋಲಿಕೆ ಮಾಡತಾರ. ಅದಕ್ಕೇ ನನ್ನ ಪಾದದೂಳಿಯ ಸ್ಯಾಂಪಲ್ ಎತ್ತಿಡಾಕೆ ಹತ್ತೀನಿ’ ಎಂದು ಅಷ್ಟೇ ಘನ ಗಂಭೀರವಾಗಿ ನುಡಿಯಿತು.

‘ಮಂಗ್ಯಾನಂಥವ್ನೇ... ಅದು ರೂಪಕವಾಗಿ ಹೇಳೂದಲೇ. ಹೊಂಡಗುಂಡಿ ರಸ್ತೆವಳಗೆ ನಡೆದಾಡೂ ಎಲ್ಲ ಮಂದಿ ಪಾದದೂಳಿ ಒಂದೇ ಥರ ಇರತೈತೆ’.

ADVERTISEMENT

ಬೈದಿದ್ದನ್ನು ಕಿವಿಗೇ ಹಾಕಿಕೊಳ್ಳದೆ ಬೆಕ್ಕಣ್ಣ, ‘ಮೋದಿಮಾಮನ ಪಾದದೂಳಿಗೆ ಯಾರೂ ಸರಿಸಮಾನರಿಲ್ಲ ಅಂತ ಕಮಲಕ್ಕನ ಮನ್ಯಾವ್ರೆಲ್ಲ ಘೋಷಣೆ ಮಾಡ್ಯಾರ. ನೆಹರೂ ಪಾದದೂಳಿಗೆ ಯಾರು ಸರಿಸಮಾನ ಅಂತ ಕಾಂಗಿಗಳ ಪ್ರಶ್ನೆ. ಪಾದದೂಳಿ ವಿಶ್ಲೇಷಣೆ ಮಾಡಾಕೆ ಏನಾರ ಹೊಸ ಟೆಕ್ನಾಲಜಿ ಕಂಡುಹಿಡಿಬೇಕು. ಆದರ ನೆಹರೂ ಪಾದದೂಳಿ ಎಲ್ಲಿ ಸಿಗತದ?’ ಎಂದಿತು.

‘ಹೊಸ ಟೆಕ್ನಾಲಜಿ... ನಿನ್ ತಲೆ! ನಮ್ಮ ದೇಶ ಹಸಿವಿನ ಸೂಚ್ಯಂಕದಾಗೆ ಇನ್ನಷ್ಟು ಕುಸಿದೈತೆ, 121 ದೇಶಗಳ ಪಟ್ಟಿಯಲ್ಲಿ ನಮ್ಮದು 107ನೇ ಸ್ಥಾನ. ದಿವಾಳಿ ಎದ್ದಿರೋ ಶ್ರೀಲಂಕಾ 64ನೇ ಸ್ಥಾನದಾಗೆ, ಬಾಂಗ್ಲಾ 84, ಪಾಕಿಸ್ತಾನ ಸಹಿತ 99ನೇ ಸ್ಥಾನದಾಗೆ ಐತೆ... ಇದನ್ನು ಮೊದಲು ಸುಧಾರಿಸಬೇಕು ಕಣೆಲೇ’ ಎಂದು ನಾನು ಉದ್ದ ಭಾಷಣ ಕುಟ್ಟಿದೆ.

‘ಅದೆಲ್ಲ ವಿರೋಧ ಪಕ್ಷದ ಹುನ್ನಾರ. ನಮ್ಮ ದೇಶದ ಹಸಿವಿನ ಸೂಚ್ಯಂಕ ಅಳೆಯಕ್ಕೆ ಅವರು ಯಾರು? ಅದಾನಿ, ಅಂಬಾನಿಯಂಥ ಸಹಸ್ರ ಕೋಟ್ಯಧಿಪತಿಗಳ ಪಾದದೂಳಿಯಿಂದ ಪಾವನವಾದ ನಮ್ಮ ದೇಶದಲ್ಲಿ ಹಂಗೆಲ್ಲ ಹಸಿವೆ ಇರಾಕೆ ಸಾಧ್ಯಾನೇ ಇಲ್ಲ’ ಬೆಕ್ಕಣ್ಣ ಗುರುಗುಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.