ADVERTISEMENT

ಹೆಂಡ, ಹೆಂಡ್ತಿ, ಕನ್ನಡ!

ಬಿ.ಎನ್.ಮಲ್ಲೇಶ್
Published 31 ಅಕ್ಟೋಬರ್ 2019, 20:03 IST
Last Updated 31 ಅಕ್ಟೋಬರ್ 2019, 20:03 IST
Churumur01-11-2019
Churumur01-11-2019   

ಗುಂಡು ಪಾರ್ಟಿ ರಂಗೇರಿತ್ತು. ‘ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮಗಾ...’ ಎಂದ ದುಬ್ಬೀರ.

‘ಥ್ಯಾಂಕೂ ಗುರು, ಸೇಮ್ ಟು ಯೂ...’ ತೆಪರೇಸಿ ತೊದಲಿದ.

‘ಲೇಯ್, ನಾನು ಕನ್ನಡದಲ್ಲಿ ಹೇಳಿದ್ರೆ ನೀನು ಇಂಗ್ಲೀಷ್‍ನಲ್ಲಿ ಉತ್ತರ ಕೊಡ್ತೀಯಲ್ಲಲೆ...’

ADVERTISEMENT

‘ಓಹ್ ಸಾರಿ ಗುರೂ... ಅಭ್ಯಾಸ ಬಲ...’

‘ನೋಡು ಮತ್ತೆ ಇಂಗ್ಲೀಷು...’

‘ತಪ್ಪಾಯ್ತಪ್ಪಾ... ಅಡ್ಡಬಿದ್ದೆ. ಪ್ಲೀಸ್, ಇನ್ನೊಂದ್ ಸಿಕ್ಸ್‌ಟೀ ಹೇಳು ಗುರು...’

‘ನೀನು ಪೂರ್ತಿ ಕನ್ನಡದಲ್ಲಿ ಮಾತಾಡಿ ತೋರ‍್ಸು, ಕೊಡಿಸ್ತೀನಿ...’

‘ಹೆಂಗಾಗುತ್ತೆ ಗುರು, ವಿಸ್ಕೀಲಿ ಸೋಡಾ ಬೆರೆತಂಗೆ ಕನ್ನಡದಲ್ಲಿ ಇಂಗ್ಲಿಷ್ ಸೇರ್ಕಂಬುಟ್ಟೇತೆ ನೋಡು. ಈಗ ಸೋಡಾಕ್ಕೆ ಕನ್ನಡದಲ್ಲಿ ಏನಂತಾರೆ? ಸೋಡಾನೆ ತಾನೇ... ಸೋಡಾ ಕನ್ನಡ ಪದ ಗುರು...’

‘ಥೂ ನಿನ್ನ, ನಿಮ್ಮಂಥವರಿಂದ ಕನ್ನಡದ ಪರಿಸ್ಥಿತಿ ಇಲ್ಲಿಗೆ ಬಂತು ನೋಡು’.

‘ಸಾರಿ ಗುರು, ಈಗ ಬಾರು, ಕುರ್ಚಿ, ಟೇಬಲ್ಲು, ಚಿಪ್ಸು, ಬಾಟ್ಲು- ಗ್ಲಾಸು ಇವೆಲ್ಲಾ ಕನ್ನಡಾನಾ ಇಂಗ್ಲೀಷಾ? ಬೀನ್ಸು-ಕ್ಯಾರೆಟ್ಟು, ಸ್ಕೂಲು- ಕಾಲೇಜು, ರೈಸು- ಸಾಂಬಾರು, ಬಸ್ಸು-ರೈಲು ಇವೆಲ್ಲ ಏನು? ನಾನು ಅಪ್ಪಟ ಕನ್ನಡಿಗ ಗುರೂ, ಕನ್ನಡ ನನ್ನ ಎದೆ ಒಳಗೈತೆ, ಬಾಯಲ್ಲಿ ಬರ್ತಿಲ್ಲ ಅಷ್ಟೆ. ಮೂಗ್ನಲ್ಲಿ ಕನ್ನಡ ಪದವಾಡ್ತೀನಿ, ನನ್ ಮನಸ್ ನೀ ಕಾಣೆ...!’

‘ಅಬ್ಬಬ್ಬ.. ರಾಜರತ್ನಂ ಪದ್ಯನೂ ಬರ್ತಾತಲ್ಲಲೆ ನಿಂಗೆ..., ಹೋಗ್ಲಿ ಕರೆಕ್ಟಾಗಿ ರಾಜರತ್ನಂ ಅವರ ಒಂದು ಪದ್ಯ ಹೇಳಿಬಿಡು, ಗುಂಡು ಕೊಡಿಸ್ತೀನಿ...’

‘ಹೆಂಡ ಇರ‍್ಲಿ, ಹೆಂಡ್ತಿ ಇರ‍್ಲಿ... ಬೇರೆಲ್ಲ ಕೊಚ್ಕೊಂಡ್ ಹೋಗ್ಲಿ... ಪರಪಂಚ್ ಇರೋತಂಕ ಮುಂದೆ ಕನ್ನಡ ಪದಗೋಳ್ ನುಗ್ಲಿ...!’

‘ಲೇಯ್ ರಾಜರತ್ನಂ ಹೇಳಿದ್ದು ಹೆಂಡ ಹೋಗ್ಲಿ, ಹೆಂಡ್ತಿ ಹೋಗ್ಲಿ, ಎಲ್ಲ ಕೊಚ್ಕಂಡೋಗ್ಲಿ ಅಂತ. ನೀನು ಹೆಂಡ ಇರ‍್ಲಿ ಅಂತಿದೀಯಲ್ಲೋ...’

‘ಗುಂಡು ಹೆಂಗೆ ಬಿಡಕಾಯ್ತದೆ ಗುರು, ಕಷ್ಟ’.

‘ಮತ್ತೆ ಹೆಂಡ್ತೀನೂ ಇರ‍್ಲಿ ಅಂತಿದೀಯ?’

‘ಮತ್ತೆ ಈಗ ಮನಿಗೆ ಹೋದಾಗ ಬಾಗಿಲು ತೆಗೆಯೋಕೆ ಬೇಕಲ್ಲಪಾ ಶಾಣ್ಯಾ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.