ADVERTISEMENT

ಚುರುಮುರಿ: ಕನ್ಯಾ ಭಾಗ್ಯ

ಮಣ್ಣೆ ರಾಜು
Published 22 ನವೆಂಬರ್ 2022, 19:24 IST
Last Updated 22 ನವೆಂಬರ್ 2022, 19:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಟ್ನಿಹಳ್ಳಿ ಐನೋರ ಹೋಟೆಲ್‍ನಲ್ಲಿ ಟೀ ಸೇವನೆಗೆ ಸೇರಿದ್ದ ಊರ ಹುಡುಗರ ಹಳಸಲು ಮುಖ ನೋಡಿ ತಿಮ್ಮಜ್ಜನ ಕರುಳು ಚುರ್ ಅಂದಿತು.

‘ಮದ್ವೆ ಆಗಲು ಹೆಣ್ಣು ಸಿಗ್ತಿಲ್ಲ ಅಂತ ಕುಂದಗೋಳದ ರೈತ ಯುವಕರು ತಹಶೀಲ್ದಾರರ ಬಳಿ ಗೋಳು ತೋಡಿಕೊಂಡಿದ್ದಾರೆ ಕಣ್ರೋ...’ ಎಂದು ಪೇಪರ್ ಓದಿ ಹೇಳಿದ ತಿಮ್ಮಜ್ಜ, ‘ಅನ್ನದಾತರ ಮನೆ ತುಂಬಿ ಅವರ ಬಾಳು ಬಂಗಾರ ಮಾಡಿ ಅಂತ ಸರ್ಕಾರ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಅಂದ.

‘ರೈತ ವರಗಳು ಬೇಡವಂತೆ, ಸಿಟಿಯಲ್ಲಿ ತಿಂಗಳ ಸಂಬಳ ಪಡೆಯೋ ಗಂಡುಗಳೇ ಬೇಕಂತೆ. ಹಳ್ಳಿಗಳಲ್ಲಿ ಅನುಕೂಲವಿಲ್ಲ, ರೈತರಿಗೆ ಆದಾಯವಿಲ್ಲ, ಸಂಸಾರ ಸಾಕುವ ಸಾಮರ್ಥ್ಯವಿಲ್ಲ ಅನ್ನುತ್ತಾರೆ ಕನ್ಯಾಮಣಿಗಳು’ ತಿಪ್ಪೇಶಿ ನೊಂದು ಹೇಳಿದ.

ADVERTISEMENT

‘ನಿನಗೇನು ಕಮ್ಮಿಯಾಗಿದೆ? ಕಣಜದ ತುಂಬಾ ಬೆಳೀತೀಯಾ, ಹತ್ತು ಸಂಸಾರ ಸಾಕುವಷ್ಟು ದುಡೀತೀಯಾ’ ಅಂದ ತಿಮ್ಮಜ್ಜ.

‘ಮದ್ವೆ ಆಗಬೇಕು ಅಂತ ಹಳೆ ಮನೆ ರಿಪೇರಿ ಮಾಡಿಸಿ ಬಾತ್‌‌‌ರೂಂ, ಬೆಡ್‌ರೂಂ, ಕಿಚನ್, ಟಾಯ್ಲೆಟ್ ಕಟ್ಟಿಸಿದೆ. ಆದ್ರೂ ಹೆಣ್ಣು ಸಿಗಲಿಲ್ಲ’ ಸೀನ ಸಂಕಟಪಟ್ಟ.

‘ಹೊಸ ಹೆಂಡ್ತಿ ಹೊಗೆಯಲ್ಲಿ ಉಸಿರುಕಟ್ಟಬಾರದು ಅಂತ ಗ್ಯಾಸ್ ಸ್ಟೌವ್ ತಂದೆ, ಕುಕ್ಕರ್, ವಾಷಿಂಗ್ ಮೆಷಿನ್ ತಂದಿಟ್ಟಿದ್ದೀನಿ, ಹೆಂಡ್ತೀನ ಓಡಾಡಿಸಲು ಬೈಕ್ ಇಟ್ಟುಕೊಂಡಿದ್ದೀನಿ. ಇದಕ್ಕಿಂತ ಇನ್ನೇನು ಮಾಡಲಿ?’ ಪುಟ್ಟೇಶಿ ದುಃಖ ಹೇಳಿಕೊಂಡ.

‘ಕನ್ಯಾ ಭಾಗ್ಯ ಯೋಜನೆ ಜಾರಿಗೆ ತಂದು ರೈತರ ವಂಶ ಉಳಿಸಿ ಅಂತ ಮಂತ್ರಿಗೆ ಮನವಿ ಮಾಡಬೇಕು’ ಅಂದ ತಿಮ್ಮಜ್ಜ.

‘ಮಂತ್ರೀನ ಕೇಳಿಕೊಂಡ್ವಿ, ಕೃಷಿ ಸಾಲ, ಗೊಬ್ಬರದ ಸಬ್ಸಿಡಿ ಕೊಡ್ತೀವಿ, ಬೇಕಾದ್ರೆ ಅನ್ನ ಭಾಗ್ಯದಲ್ಲಿ ಇನ್ನೆರಡು ಕೇಜಿ ಅಕ್ಕಿ ಜಾಸ್ತಿ ಕೊಡ್ತೀವಿ, ಕನ್ಯಾ ಭಾಗ್ಯ ಮಾತ್ರ ಸಾಧ್ಯವಿಲ್ಲ ಅಂದುಬಿಟ್ರು...’ ಶಿವಲಿಂಗ ಬೇಸರದಿಂದ ಟವೆಲ್ ಒದರಿ ಎದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.