ADVERTISEMENT

ಚುರುಮುರಿ: ಲೇಣೆದೇಣೆ ಆಟ

ಲಿಂಗರಾಜು ಡಿ.ಎಸ್
Published 21 ಮಾರ್ಚ್ 2022, 19:31 IST
Last Updated 21 ಮಾರ್ಚ್ 2022, 19:31 IST
   

‘ಸಾ, ಇನ್ನೇನು ಐಪಿಎಲ್ ಸುರುವಾಯ್ತಾ ಅದೆ. ನೋಡಕ್ಕೆ ತಯಾರಾಗಿದೀರಾ?’ ತುರೇಮಣೆಗೆ ಕೇಳಿದೆ.

‘ಬುಡ್ಲಾ ಐಪಿಎಲ್‍ನಲ್ಲೇನದೆ! ರಾಜಕೀಯ ವೈರಸ್ ಆಟದ ಮಜಾ ಕ್ರಿಕೆಟ್ಟಲ್ಲಿ ಬಂದದೇ’ ಅಂತ ಮೂಗೆಳೆದರು.

‘ಅಲ್ಲ ಸಾ, ರಾಜಕೀಯಕ್ಕೂ ಕ್ರಿಕೆಟ್ಟಿಗೂ ಏನು ಸಂಬಂಜ’ ಅಂತ ಆಶ್ಚರ್ಯದೇಲಿ ಕೇಳಿದೆ.

ADVERTISEMENT

‘ಬೊಡ್ಡಿಹೈದ್ನೆ, ಇಲ್ಲಿ ರಾಜಕಾರಣದ ವೈರಸ್ಸುಗಳೇ ಪ್ಲೇಯರ್ಸು ಕನೋ. ಇಲಾಖೆ ಯಲ್ಲಿರೋ ಭ್ರಷ್ಟಾಚಾರಿಗಳು, ದಲ್ಲಾಳಿಗಳೇ ಚಿಯರ್ ಗರ್ಲ್ಸ್‌. ಅಕ್ರಮದ ಸಿಕ್ಸರ್ ಎತ್ತಿದಾಗೆಲ್ಲಾ ಡಂಕಣಕ ಅಂತ ಕುಣಿತವೆ. ರಾಜಕೀಯದೇಲಿ ‘ನನಗೊಂದು, ನನ್ನ ಮಗನಿಗೊಂದು ಟಿಕೆಟ್ ಕೊಟ್ರೆ ನಿಮ್ಕಡಿಕೆ’ ಅಂತ ಯವಾರ ಮಾಡಿ ಓಪನ್ ಮ್ಯಾಚ್ ಫಿಕ್ಸಿಂಗ್ ಮಾಡಿಕೋದಿಲ್ವೇ! ಟೀಂ ಪೂರ್ತಿ ಹೈಜಾಕ್ ಮಾಡಿಕ್ಯಂಡು ಮ್ಯಾಚೇ ಇಲ್ದಂಗೆ ಟ್ರೋಫಿ ತಗಳದು ಕ್ರಿಕೆಟ್ಟಲ್ಲಿ ಆಯ್ತದಾ? ರಾಜಕೀಯದ ಪ್ಲೇಯರುಗಳು ಪರ್ಸೆಂಟೇಜು, ಒಪ್ಪಂದದ ಗೋಲ್‍ಮಾಲ್ ಮಾಡಿದಂಗೆ ಕ್ರಿಕೆಟ್ಟೇಲಿ ಆದದೇ? ‘ಕಾಸು ಕೊಟ್ಟೋನೆ ಬಾಸು’ ಅಂತ ವರ್ಗಾವಣೆ ದಂಧೆ ಕ್ರಿಕೆಟ್ಟಲ್ಲಿ ಆಯ್ತದಾ? ಪರ್ಫಾರ್ಮೆನ್ಸ್ ಸರಿಯಾಗಿಲ್ಲದಿದ್ರೆ ಟೀಮಿಂದ ಆಚಿಗೋಗಬೇಕಾಯ್ತದೆ ಕನೋ. ಆದರೆ ರಾಜಕೀಯದೇಲಿ ಮಂತ್ರಿ ಪರ್ಫಾರ್ಮೆನ್ಸ್‌ ಸರಿಯಾಗಿಲ್ಲ ಅಂದ್ರೆ ತಗದಾಕೋ ದಾಸತ್ತು ಯಾರಿಗದೆ?’ ಅಂತ ಹೇಳಿ ನಿಟ್ಟುಸಿರುಬುಟ್ಟರು.

‘ಸಾ, ಇಲ್ಲಿ ಥರ್ಡ್ ಅಂಪೈರ್ ಇಲ್ಲುವೇ?’ ಅಂದೆ.

‘ಕೋರ್ಟೇ ಥರ್ಡ್ ಅಂಪೈರು ಕನೋ. ಇವರು ಲಂಚಾಟಗಾರರ ಬಾಯಿಗೆ ಕುಕ್ಕೆ ಹಾಕುತ್ಲೆ ಅವರೆ. ಆದ್ರೂ ನಾಮ ಇಕ್ಕೋ ಕೆಲಸ ನಿಲ್ಲತಿಲ್ಲ’ ತುರೇಮಣೆ ಬೇಜಾರಾದ್ರು.

‘ಅಲ್ಲ ಸಾ, ಈ ಹಲವಂಗದ ಆಟ ಜನಕ್ಕೆ ಬೇಕಾಗ್ಯದಾ?’ ಅಂತ ಕೇಳಿದೆ.

‘ಜನಕ್ಕೆ ಬೇಕಾಗಿಲ್ಲ ಕನೋ. ಲಂಚಮುಕ್ತ, ಉತ್ತರದಾಯಿತ್ವ, ಗುಣಮಟ್ಟ, ಕ್ರಮ ಅಂತ ನಾನು ಬುದ್ಧಿ ಕಂಡಾಗಿಂದ ನಾಯಕರು ಹೇಳುತ್ಲೇ ಬಂದವರೆ. ಆದರೂ ಲೇಣೆದೇಣೆ ಆಟ ನಿಂತಿಲ್ಲ. ನಾವೂ ನೋಡಿ ಮಜ ತಕ್ಕಂದು ಸ್ವಲ್ಪ ದಿನಕೆ ಮರತೋಯ್ತಿವಿ’ ಅಂದು ಸುಮ್ಮಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.