ADVERTISEMENT

ಚುರುಮುರಿ | ಲಾಕ್‍ಡೌನ್ ಲಗೋರಿ

ಲಿಂಗರಾಜು ಡಿ.ಎಸ್
Published 13 ಏಪ್ರಿಲ್ 2020, 19:19 IST
Last Updated 13 ಏಪ್ರಿಲ್ 2020, 19:19 IST
   

ಲಾಕ್‍ಡೌನ್ ಟೈಮಲ್ಲಿ ಪಿಣ್ಣಗೆ ಉಂಡು ಕುಕ್ಕುರುಗಾಲು ಚರಿತ್ರೆ ಓದಿ ಟೀವಿಲಿ ಸಿನಿಮಾ, ನ್ಯೂಸ್, ಹಳೇ ಕ್ರಿಕೆಟ್ಟು ನೋಡದೇ ಕೆಲಸಾಗಿತ್ತು ತುರೇಮಣೆಗೆ. ಅವರೆಡ್ತಿಗೆ ಕ್ರಿಕೆಟ್ ಗೊತ್ತಿರಲಿಲ್ಲ, ಕನ್ನಡ ಸೀರಿಯಲ್ ಅಂದ್ರೆ ಪ್ರಾಣ. ರಿಮೋಟಿಗೋಸ್ಕರ ದಿನೆಲ್ಲಾ ಇಬ್ಬರಿಗೂ ಪ್ರೇಮಕಲಹ ನಡೀತಿತ್ತು.

ಸಾಮಾನ್ಯವಾಗಿ ಶ್ರೀಮತಿ ಸ್ಪಿನ್ನಿಗೆ ತುರೇಮಣೆನೇ ಔಟಾಗಿ ರಿಮೋಟು ಕೊಟ್ಟುಬುಡೋರು. ಆವತ್ತು ಸೀರಿಯಲ್ ಶುರುವಾಗೋ ಟೈಮಾಗಿತ್ತು, ತುರೇಮಣೆ ಕ್ರಿಕೆಟ್ ಬುಟ್ಟು ಮೇಲೆದ್ದಿರಲಿಲ್ಲ. ಇವರುನ್ನ ಕ್ರಿಕೆಟ್ಟಲ್ಲೇ ಕೆಡವಬೇಕು ಅಂದುಕ್ಯಂಡು ಶ್ರೀಮತಿ ತುರೇಮಣೆ ಕೂರುತ್ತಾ ಕೇಳಿದರು-

‘ಈ ಬ್ರೆಟ್‍ಲೀ ಅವರಣ್ಣನಂಗೆ ಸಿನಿಮಾದಲ್ಲಿ ಆಕ್ಟ್ ಮಾಡಕುಲ್ವೇ?’ ತುರೇಮಣೆಗೆ ಬ್ರೆಟ್‍ಲೀ ಅಣ್ಣ ಯಾರು ಅಂತ ಗೊತ್ತಾಗದೇ ಶ್ರೀಮತಿಯನ್ನೇ ಕೇಳಿದರು. ‘ಮಂತೆ ನಿಮಗಿನ್ನೇನು ಗೊತ್ತು, ಇವರಣ್ಣ ಬ್ರೂಸ್‍ಲೀ ಅಲುವೇ!’ ತುರೇಮಣೆಗೆ ಕನ್‌ಫ್ಯೂಸ್ ಆಯ್ತು.

ADVERTISEMENT

‘ಡ್ರಿಂಕ್ಸ್, ಟೀಬ್ರೇಕಲ್ಲಿ ಬ್ರಾಂದಿ, ವಿಸ್ಕಿ, ಟೀ-ಕಾಪಿ ಏನೂ ಕಾಣೆ! ಎಲ್ಲ ಪೆಪ್ಸಿ, ಕೋಲಾ ಹಿಡಕ ನಿಂತವ್ರೆ. ನೋಡ್ರೀ ನೋಡ್ರಿ ಆ ಅಂಪೈರು, ಬಾಲು ಕೈಯ್ಯಗೇ ಮಡಿಕಂಡು ನೋಬಾಲ್ ಅಂತ ಸುಳ್ಳೇಳ್ತಾವನೆ. ಮಾಯ್ಕಾರ ನನಮಗ!’ ಅಂದುದ್ಕೆ ತುರೇಮಣೆ ಅಡ್ಡಗ್ಯಾನಾಗಿದ್ದರು.

‘ಒಬ್ಬಂದು ಶಾರ್ಟ್‌ಲೆಗ್ಗಂತೆ, ಇನ್ನೊಬ್ಬಂದು ಫೈನ್‌ಲೆಗ್ಗಂತೆ! ತಳ್ಳಿ ಮಾತಾಡಬಾರ್ದು!’ ಅಂದರು.

ತುರೇಮಣೆ ನಾಲಗೆ ಸೀಲ್‍ಡೌನ್ ಆಯ್ತು. ‘ಅಗಾ ಅಗಾ ಇನ್ನೊಂದು ವಿಕೆಟ್ ಬಿತ್ತು’ ಅಂದ್ರು ಶ್ರೀಮತಿ ತುರೇಮಣೆ. ‘ಥೂ ಅದು ರೀಪ್ಲೇ ಕನಮ್ಮಿ. ಗೆಲ್ಲಕೆ ಒಂದು ಓವರಲ್ಲಿ 12 ರನ್ನು ಬೇಕು ಸುಮ್ಮಗಿರು’ ಅಂದ್ರು ತುರೇಮಣೆ.

‘ಹಂಗಾದ್ರೆ ಆರೂ ಬಾಲು ಕೊಟ್ಟು 12 ರನ್ ಇಸುಗಂಡ್ರೆ ಆಟ ಓವರ್ ಆಯ್ತದಲ್ವಾ’ ಅಂದ ಹೆಂಡತಿ ಮಾತಿಗೆ ತುರೇಮಣೆ ಸಿಟ್ಟಿಂದ ರಿಮೋಟ್ ಅಕ್ಕಡಿಕೆ ಮಡಗಿ ಸುಮ್ಮನಾದರು. ಶ್ರೀಮತಿ ತುರೇಮಣೆ ‘ಮಗಳು ಜಾನಕಿ’ ಹಾಕ್ಯಂಡಾಗ ತುರೇಮಣೆ ಕೇಳಿದರು ‘ಜಾನಕಿ ಯಾರಮ್ಮಿ?’

‘ನಿಮ್ಮ ಚಿಗವ್ವ! ತಬ್ಲಿಗಿ ಥರಾ ಚೆಲ್ಲಾಟ ಆಡದೇ ಎದ್ದು ಆಚಿಗೆ ಕಡೀರಿ’ ಅಂದ್ರು ಆಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.