ADVERTISEMENT

ಕೊರೊನಾ ಸೌಭಾಗ್ಯ

ಸುಮಂಗಲಾ
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST
   

ಗೆಳತಿಯ ಮಗಳು ಫೋನ್ ಮಾಡಿದ್ದಳು. ‘ನೋಡ್ರೀ... ನಮ್ಮ ಚೌಕಿದಾರ್‍ರು ಹೆಂಗ ಕೊರೊನಾಗೆ ಲೆಫ್ಟು, ರೈಟು ತಗಂಡಾರಂತ. ಇಟಲಿ, ಅಮೆರಿಕದಂಥ ದೇಶದಾಗೇ ಕೊರೊನಾ ಸೋಂಕಿತರ ಸಂಖ್ಯೆ ಐದಂಕಿ ದಾಟ್ಯಾವು, ನಮ್ಮಲ್ಲಿ ಇನ್ನಾ ನಾಕಂಕಿನೂ ದಾಟದಂಗ ಹೆಂಗ ಚೌಕಿದಾರ್‍ರು ದಿಡ್ಡಿ ಬಾಗಿಲು ಮುಚ್ಚಿಸ್ಯಾರ. ಕೇಂದ್ರ ಛಲೋ ಕ್ರಮ ತಗಂಡೈತಿ ಅಂತ ನಿಮ್ಮ ಸೋನಕ್ಕ, ರಾಗ್ಯಾ ಸಹಿತ ಹೊಗಳ್ಯಾರ. ಕೊರೊನಾ ಎಷ್ಟ್ ಸೌಭಾಗ್ಯ ತಂದೈತಿ’.

‘ಮಂದಿ ಸಾಯಾಕ ಹತ್ಯಾರ, ಗುಳೇ ಹೋದವರಿಗೆ ಕೆಲಸನೂ ಇಲ್ದೇ ಹೊಟ್ಟಿಗೂ ಇಲ್ದೇ ಊರಿಗೆ ವಾಪಾಸಾಗಕ್ಕೆ ಬಸ್ಸೂ ಇಲ್ದೆ ನೆಡಕಂಡು ಹೊಂಟಾರಂತ. ಸೌಭಾಗ್ಯ ಅಲ್ಲ, ದೌರ್ಭಾಗ್ಯ ತಂದೈತಿ’ ಸಿಟ್ಟಿನಿಂದ ಹೇಳಿದೆ. ಅವಳು ವಾದ ಮುಂದುವರಿಸಿದಳು, ‘ಜನಕ್ಕೆ ₹ 1.7 ಲಕ್ಷ ಕೋಟಿ ಪ್ಯಾಕೇಜ್ ಕೊಟ್ಟಾರ, ಮಂದಿಗಿ ಮನ್ಯಾಗಿಂದಲೇ ಕೆಲಸ ಮಾಡಕ್ಕ ಹೇಳ್ಯಾರ, ದುಡಿಮೆ ಇಲ್ಲದೋರಿಗೆ ಕಾಸು ಕೊಡ್ತೀವಿ ಅಂದಾರ. ಸಾಲ ವಸೂಲಾತಿ ಸದ್ಯಕ್ಕೆ ಬ್ಯಾಡ ಅಂದಾರ. ಇದು ಚೌಕಿದಾರ್‍ರು ಕೊಟ್ಟ ಸೌಭಾಗ್ಯ ಹೌದಿಲ್ರೀ’.

‘ನೀನ ಇಟ್ಕಳವ್ವಾ ಸೌಭಾಗ್ಯ... ನನಗರ ಚಾ ಕುಡಿಲಾರದ ತೆಲಿ ಗರಂ ಆಗೈತಿ...’

ADVERTISEMENT

‘ನನಗೂ ಅಷ್ಟೇರಿ. ನಮ್ಮನ್ಯಾಗ ಚಾಪುಡಿ ಐತಿ, ಸಕ್ರಿನೆ ಇಲ್ರೀ. ನಾ ಚಾಪುಡಿ ಕೊಟ್ಟರೆ ಸಕ್ರಿ ಕೊಡ್ತೀರೇನ್ರಿ’ ಮೆತ್ತಗೆ ಉಸುರಿದಳು.

‘ಹೆಂಗ ಬರ್ತೀ... ಪೊಲೀಸರು ಲಾಠಿ ಬೀಸ್ತಾರ’.

‘ನಾ ಹೆಂಗಾರ ನಿಪಟಾಯಿಸ್ಕಂಡು ಬರ್ತೀನ್ರಿ’.

ಅರ್ಧ ಗಂಟೆಯಲ್ಲಿ ಕರೆಗಂಟೆ ಬಾರಿಸಿತು. ಅವಳು ಒಳಬರುತ್ತಲೇ ಬಾಗಿಲು ಮುಚ್ಚಿದೆ. ಅಡುಗೆ ಮನೆಗೆ ಹೋದವಳೇ ಟೀಶರ್ಟಿ
ನಡಿಯಲ್ಲಿ ಹೊಟ್ಟೆಗೆ ಕಟ್ಟಿಕೊಂಡಿದ್ದ ಟೀಪುಡಿ ಪೊಟ್ಟಣ ಹೊರಗೆಳೆದಳು. ನಾನು ಎತ್ತಿಟ್ಟಿದ್ದ ಸಕ್ಕರೆ ಪೊಟ್ಟಣವನ್ನು ಹೊಟ್ಟೆಗೆ ಕಟ್ಟಿಕೊಂಡಳು. ‘ಏನವಾ ಇದು... ಒಳ್ಳೆ ಫುಡ್ ಬಾಂಬರ್ ಆಗೀಯಲ್ಲ, ದಾರಿವಳಗ ಪೊಲೀಸರು ಯಾರೂ ಹಿಡಿಲಿಲ್ಲೇನು?’

‘ನಿಮಗ ಹುಷಾರಿಲ್ಲ, ಔಷಧ ಕೊಡಾಕ ಹೊಂಟೀನಿ ಅಂದೇರಿ’ ಎನ್ನುತ್ತ ಹೊರಟವಳನ್ನು ಕಳಿಸಲು ಬಾಗಿಲು ತೆರೆದರೆ, ಜೊತೆಗೆ ಬಂದಿದ್ದ ಪೊಲೀಸಪ್ಪ ನನ್ನ ನೋಡುತ್ತಲೇ ಹೊರಗಿಂದಲೇ, ‘ನಡೀರಿ ದವಾಖಾನಿಗೆ’ ಎನ್ನುತ್ತಾ ಲಾಠಿ ಬೀಸಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.