ADVERTISEMENT

ಚುರುಮುರಿ: ಶಿವರಾತ್ರಿ ಜಾಗರಣಿ!

ಬಿ.ಎನ್.ಮಲ್ಲೇಶ್
Published 11 ಮಾರ್ಚ್ 2021, 19:30 IST
Last Updated 11 ಮಾರ್ಚ್ 2021, 19:30 IST
   

‘ಏನ್ರಲೆ, ಶಿವರಾತ್ರಿ ಹೆಂಗಾತು, ಉಪಾಸ, ಜಾಗರಣಿ ಜೋರಾ?’ ಹರಟೆಕಟ್ಟೆಯಲ್ಲಿ ಗುಡ್ಡೆ ಎಲ್ಲರನ್ನೂ ವಿಚಾರಿಸಿದ.

‘ನಮ್‍ದೇನೂ ಇಲ್ಲಪ್ಪ, ಆದ್ರೆ ನಮ್ ತೆಪರೇಸಿ ಫುಲ್ ಉಪವಾಸ ಮಾಡಿದ್ನಂತೆ. ಮೂರ‍್ಹೊತ್ತೂ ಲೈಟಾಗಿ ಸ್ವಲ್ಪ ಉಪ್ಪಿಟ್ಟು, ಸ್ವಲ್ಪ ಅವಲಕ್ಕಿ-ಮೊಸರು, ಸ್ವಲ್ಪ ವಗ್ಗರಣಿ ಮಂಡಕ್ಕಿ... ಮೇಲೆ ಹಾಲು, ಎಳನೀರು, ಜ್ಯೂಸು... ಗ್ಯಾಪಿನಲ್ಲಿ ಹಣ್ಣು ಹಂಪಲು, ಡ್ರೈಫ್ರೂಟು... ಇಷ್ಟೇ. ಉಪವಾಸ ಅಂದ್ರೆ ಭಾಳ ಕಟ್‍ನಿಟ್ಟು ಅವ್ನು...’ ದುಬ್ಬೀರ ನಕ್ಕ.

‘ಅಲ್ಲಲೆ ಅಟಾಕಂದು ತಿಂದ ಮೇಲೆ ಅದು ಉಪವಾಸ ಹೆಂಗಾಕ್ಕತಿ? ಧ್ಯಾನ, ಜಾಗರಣಿ ಬದ್ಲು ಶಿವಾ ಅಂತ ಗಡದ್ ನಿದ್ದಿ ಹೊಡೆದಿರ್ತಾನೆ ಅಷ್ಟೆ’ ಕೊಟ್ರೇಶಿಗೂ ನಗು.

ADVERTISEMENT

‘ಲೇಯ್ ನಿಂಗೊತ್ತಿಲ್ಲ, ನಮ್ ತೆಪರೇಸಿ ಧ್ಯಾನಕ್ಕೆ ಕುಂತಾಂದ್ರೆ ಅನಾಮತ್ ನೆಲದಿಂದ ಅರ್ಧ ಅಡಿ ಮೇಲಕ್ಕೇಳ್ತಾನೆ. ಏನಂತ ತಿಳಿದಿ ಅವುನ್ನ?’ ಗುಡ್ಡೆ ಉರಿಯೋ ಬೆಂಕಿಗೆ ತುಪ್ಪ ಸುರಿದ. ಆದರೆ ಯಾರು ಏನು ಮಾತಾಡಿದ್ರೂ ತೆಪರೇಸಿ ಪಿಟಿಕ್ಕೆನ್ನಲಿಲ್ಲ.

‘ಯಾಕೋ ತೆಪರೇಸಿ ಮಾತಾಡ್ತಿಲ್ಲಪ್ಪ, ಶಿವರಾತ್ರಿಯಿಂದ ಮೌನವ್ರತ ಹಿಡಿದಿರಬೇಕು ಅನ್ನುಸ್ತತಿ...’

‘ಅಥ್ವ ಮನ್ಯಾಗೆ ಅವನೆಂಡ್ತಿ ಪಮ್ಮಿ ಪೂಜಿ ಮಾಡಿ ಪತ್ರಿ ಏರಿಸಿರಬೇಕು...’

‘ನಂಗೇನೋ ಯಾರೋ ಮಾಟ ಮಾಡ್ಸಿ ಬಾಯಿ ಬಂದ್ ಮಾಡ್ಸಿರಬೇಕು ಅಂತ ಅನುಮಾನ...’

ಮತ್ತೂ ಯಾರ ಮಾತಿಗೂ ತೆಪರೇಸಿ ಬಾಯಿ ಬಿಡಲಿಲ್ಲ.

ಅಷ್ಟರಲ್ಲಿ ದುಬ್ಬೀರನ ಮೊಬೈಲ್‍ಗೆ ಯಾವುದೋ ಕರೆ ಬಂತು. ನೋಡಿದ್ರೆ ಪಮ್ಮಿ! ‘ಪಮ್ಮಕ್ಕ ಯಾಕೋ ನಿನ್ ಗಂಡ ಏನೂ ಮಾತಾಡ್ತಿಲ್ಲಪ್ಪ... ಯಾಕ, ಏನಾತು?’ ದುಬ್ಬೀರ ಕೇಳಿದ.

‘ನಂಗೂ ಗೊತ್ತಿಲ್ರಿ, ನಿನ್ನಿ ನಿದ್ದೀನೇ ಮಾಡಿಲ್ಲ. ಅದ್ಯಾವುದೋ ಸೀಡಿ ಕೇಸಿನ್ಯಾಗೆ 2+3+4 ಅಂತಲ್ಲ... ಅದು ಏನು, ಯಾರು ಅಂತ ತೆಲಿ ಕೆಡಿಸ್ಕಂಡ್ ಕುಂತಾನ. ನಿಮಗೇನಾದ್ರೂ ಗೊತ್ತೇನ್ರಿ?’ ಪಮ್ಮಿ ಪ್ರಶ್ನೆಗೆ ದುಬ್ಬೀರನೂ ಪಿಟಿಕ್ಕೆನ್ನಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.