ADVERTISEMENT

ಚುರುಮುರಿ: ಮೇಲ್ಮನೆ ಆಲಾಪನೆ!

ತುರುವೇಕೆರೆ ಪ್ರಸಾದ್
Published 18 ಮೇ 2022, 19:45 IST
Last Updated 18 ಮೇ 2022, 19:45 IST
ಚುರುಮುರಿ
ಚುರುಮುರಿ   

ಪರ್ಮೇಶಿ, ರಾಜಕೀಯ ಮುತ್ಸದ್ದಿ ಭುಜಂಗಯ್ಯನವರ ಮುಂದೆ ಅವರ ಸಂದರ್ಶನಕ್ಕೆ ಕುಳಿತಿದ್ದ. ‘ಮೇಲ್ಮನೆಗೆ ನೀವೂ ಆಕಾಂಕ್ಷಿಗಳು ಅಂತ ಗೊತ್ತಾಯ್ತು. ಮುಂದೆ ಕೆಳಮನೆಗೆ ನಿಲ್ಲಲ್ವಾ’ ಪರ್ಮೇಶಿ ಕೇಳಿದ.

‘ಆಸೆ ಏನೋ ಐತೆ. ಆದ್ರೆ ಅವಾಗ ಟಿಕೆಟ್ ಸಿಗ್ತದೋ ಎಂಗೋ? ಅದಕ್ಕೇ ಸದ್ಯಕ್ಕೆ ಮೇಲ್ಮನೆಗೆ ಸೇರ್ಕಂಬುಡೋದು... ಆಮ್ಯಾಕೆ ಇದನ್ ಬುಟ್ಟು ಅಲ್ ಎಲೆಕ್ಷನ್ಗೆ ನಿಂತ್ಕೊಳ್ಳೋದು’.

‘ಅಂದ್ರೆ ಮೇಲ್ಮನೇಲಿ ನಿಮ್ಗೆ ಆಸಕ್ತಿ ಇಲ್ಲ ಅಂದಂಗಾಯ್ತು’.

ADVERTISEMENT

‘ಅಲ್ ಓಗಿ ಡಮ್ಮಿ ರಬ್ಬರ್‌ಸ್ಟ್ಯಾಂಪ್‌ ತರ ಕುಕ್ಕರ್ ಬಡಿಯಕ್ಕೆ ಯಾರಿಗ್ ಆಸೆ ಇರ್ತದೆ?’

‘ಮೇಲ್ಮನೆ ಅಂದ್ರೆ ಚಿಂತಕರ ಚಾವಡಿ ಅಂತಿದ್ರು...’

‘ಈಗ ಅದು ಸಂತ್ರಸ್ತರ ಚಾವಡಿ ಆಗೈತೆ. ಮುಂಚಿನ ಥಿಂಕ್‍ಟ್ಯಾಂಕ್ ಈಗ ಕೋಟಿವೀರರ ವೋಟ್‍ಬ್ಯಾಂಕ್ ಆಗೈತೆ. ಆಸ್ತಿ ಅಂತಸ್ತಿಗೆ ಕೆಳಮನೆ, ದೊಡ್ಡಸ್ತಿಕೆಗೆ ಮೇಲ್ಮನೆ, ಅಲ್ಲಿರೋದು ಸುಮ್ಮನೆ ಅನಿಸ್‍ಬಿಟ್ಟೈತೆ’.

‘ಯಾಕ್ ನಿಮ್ಗೆ ಇಂತ ಅಭಾವ ವೈರಾಗ್ಯ?’

‘ಬೇಕಾದ್ ಬಿಲ್ ಪಾಸ್ ಮಾಡ್ಕಳಕ್ ನಾವ್ ಕೈ ಎತ್ತಕ್ ಬೇಕು, ವಿಪ್ ಅಂದ್ರೆ ಗಪ್‍ಚಿಪ್ಪಾಗ್ ಕೂರ್ಬೇಕು. ಈ ಹಗರಣ ಅದೂ ಇದೂ ಅಂತ ಸೀಟು ದಬ್ಬಾಕ್ಕಂಡಿರ್ತಾರಲ್ಲ, ಅವರು ಮತ್ ಮಂತ್ರಿಗಿರಿ ಗಿಟ್ಟಿಸ್ಕಳೋಕೆ ಈ ಮೇಲ್ಮನೆ ಬೇಕು, ಆಮ್ಯಾಕೆ ಬೇರೆ ಪಾರ್ಟಿಯಿಂದ ಆಪರೇಶನ್ ಮಾಡುಸ್ಕಂಡು ಬಂದೋರ್ಗೆ ಇದು ಆಶ್ರಯಧಾಮ ಇದ್ದಂಗೆ. ಇನ್ ನೇರವಾಗ್ ಗೆಲ್ಲಕ್ ಆಗ್ದೆ ಇರೋ ದೊಡ್ ಮನುಷ್ಯರಿಗೆಲ್ಲ ಇದು ಹಿತ್ಲು ಬಾಗ್ಲಿದ್ದಂಗೆ. ಬತ್ತಾ ಬತ್ತಾ ಇದೊಂಥರಾ ಸೋತ ಕುದುರೆಗಳ ಲಾಯ ಆದಂಗ್ ಆಗೈತೆ’.

ಅಷ್ಟರೊಳಗೆ ಅವರ ಶ್ರೀಮತಿ ಬಂದ್ರು. ‘ಸರ್ಕಾರಿ ಬಂಗ್ಲೆ ಹೋದ್ಮೇಲೆ ಇಲ್ ಮಹಡಿ ಮನೆಗೆ ಬಂದು ಮಂಡಿ ನೋವು ಅಂತ ಒದ್ದಾಡ್ತಿದೀರಿ, ಕೆಳಗೆ ಇಳಿಯೋದೇ ಕಷ್ಟ, ಇನ್ನು ಕೆಳಮನೆಗೆ ಹೋಗ್ತಾರಂತೆ’ ಎಂದು ಮೂದಲಿಸಿದರು.

‘ಅಂಗೆಲ್ಲಾ ನನ್ನ ಅಂಡರ್‌ಎಸ್ಟಿಮೇಟ್ ಮಾಡ್ಬೇಡ ಕಣೆ. ನಾನು ಬರೀ ಬೂದಿಯಿಂದ ಎದ್ ಬರೋ ಫೀನಿಕ್ಸ್ ಅಲ್ಲ, ಬೂದಿಯಿಂದ ಆಕಾಶಕ್ಕೇ ಆರೋ ಕ್ರಯೋಜನಿಕ್ ರಾಕೆಟ್ಟು...’ ಗುಡುಗಿದರು ಭುಜಂಗಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.