ADVERTISEMENT

ಚುರುಮುರಿ | ಸರ್ವಬಣ ಸಂಪನ್ನ

ಮಣ್ಣೆ ರಾಜು
Published 23 ಮೇ 2023, 23:44 IST
Last Updated 23 ಮೇ 2023, 23:44 IST
   

‘ಮಕ್ಕಳಿಗೆ ಆಸ್ತಿ ಹಂಚುವುದಕ್ಕಿಂತ ಮಂತ್ರಿಗಳಿಗೆ ಖಾತೆ ಹಂಚುವುದು ಕಷ್ಟ ಅಲ್ವೇನ್ರೀ?’ ಕೇಳಿದಳು ಸುಮಿ.

‘ಹೌದು, ನೀರಾವರಿ ಜಮೀನು ಬೇಕು, ಫಲ ಕೊಡುವ ತೋಟ ಬೇಕು, ಬಂಗಾರ ಬೆಳೆಯುವ ಭೂಮಿ ಬೇಕು ಅಂತ ಮಕ್ಕಳು ಕೇಳುವಂತೆ, ಪ್ರಭಾವಿ ಖಾತೆ ಬೇಕೆಂದು ಮಂತ್ರಿಗಳು ಆಸೆಪಡುವುದು ಸಹಜ’ ಅಂದ ಶಂಕ್ರಿ.

‘ಸರ್ಕಾರದಲ್ಲಿ ಸಿಎಂ ಬಣ, ಡಿಸಿಎಂ ಬಣ, ಮಂತ್ರಿ ಸ್ಥಾನ ಸಿಗದ ಸಂತ್ರಸ್ತರ ಬಣ, ಯಾವ ಬಣದಲ್ಲೂ ಗುರುತಿಸಿಕೊಳ್ಳದವರ ಬಣ ಇವೆಯಂತೆ. ಎಲ್ಲಾ ಬಣಗಾರರನ್ನು ನಿಭಾಯಿಸುವುದು ನಾಯಕರಿಗೆ ಸವಾಲಿನ ಕೆಲಸವೇ...’

ADVERTISEMENT

‘ಬಣ ಬವಣೆ ಎಲ್ಲ ಸರ್ಕಾರಗಳಲ್ಲೂ ಇದ್ದಿದ್ದೇ. ಬಣ ಬಾಧೆ ಉಲ್ಬಣವಾದಾಗ ಸಕಾಲದಲ್ಲಿ ಗುಣಪಡಿಸಿ ಸರ್ವಬಣ ಸಮನ್ವಯ ಕಾಪಾಡಲು ನಾಯಕರು ಸರ್ವಬಣ ಸಂಪನ್ನರಾಗಬೇಕು’.

‘ಪರಸ್ಪರ ಕೈಕೈ ಹಿಡಿದು ಒಗ್ಗಟ್ಟಿನಿಂದ ಆಡಳಿತ ನಡೆಸಿ, ಕೈ ಕೊಡುವ, ಕೈ ಮಿಲಾಯಿಸುವ ಸಾಹಸ ಮಾಡಬೇಡಿ, ಸಾಮರಸ್ಯ ಜಪ, ಸ್ನೇಹಮಂತ್ರ ಜಪಿಸುತ್ತಾ, ಜನರ ಆಶೋತ್ತರಗಳನ್ನು ಈಡೇರಿಸುತ್ತಾ ಭಾಗ್ಯವಂತರಾಗಿ ಬಾಳಿರಿ ಎಂದು ನಾಯಕರಿಗೆ ಪಕ್ಷದ ಹೈಕಮಾಂಡ್ ಸುಖ ಸರ್ಕಾರದ ಸೂತ್ರಗಳನ್ನು ಬೋಧಿಸಿದೆಯಂತೆ’.

‘ಅಷ್ಟೇ ಅಲ್ಲ, ಹಾರ್ಡ್‌ವರ್ಕ್ ಮಾಡಿ ಪಾರ್ಲಿಮೆಂಟ್ ಪರೀಕ್ಷೆಯನ್ನು ಡಿಸ್ಟಿಂಕ್ಷನ್‍ನಲ್ಲಿ ಪಾಸ್ ಮಾಡುವ ಸವಾಲನ್ನೂ ಹೈಕಮಾಂಡ್ ನೀಡಿದೆಯಂತೆ’.

‘ಚುನಾವಣೆಯಲ್ಲಿ ಸೋತಿರುವ ಪಕ್ಷಗಳು ಹೆಡೆ ತುಳಿದ ಹಾವಿನಂತೆ ಬುಸುಗುಡುತ್ತಿವೆ. ಆ ಪಕ್ಷಗಳ ಕಿವಿ, ಕಣ್ಣು, ಬಾಯಿಗೆ ಬೀಳದಂತೆ ಎಚ್ಚರಿಕೆಯಿಂದ ಆಡಳಿತ ನಡೆಸಿ ಎಂದೂ ಹೇಳಿದೆಯಂತೆ’.

‘ಆಡಳಿತದಲ್ಲಿ ಎದುರಾಗುವ ದುಃಖ ದುಮ್ಮಾನಗಳನ್ನು ನಾವು ಬಗೆಹರಿಸುತ್ತೇವೆ, ದೆಹಲಿ ವಿಮಾನ ಹತ್ತಿ ನಮ್ಮ ಮುಂದೆ ಬನ್ನಿ, ಮೀಡಿಯಾ ಮುಂದೆ ಹೋಗಿ ಗೋಳಾಡಬೇಡಿ ಎಂದು ನಾಯಕರಿಗೆ ಹೈಕಮಾಂಡ್ ಕಿವಿಮಾತು ಹೇಳಿರಬಹುದು...’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.