ADVERTISEMENT

ಚುರುಮುರಿ: ಸಿ.ಡಿ ಸೇಡು!

ಮಣ್ಣೆ ರಾಜು
Published 5 ಫೆಬ್ರುವರಿ 2023, 18:38 IST
Last Updated 5 ಫೆಬ್ರುವರಿ 2023, 18:38 IST
Churumuri==06-02-2023.
Churumuri==06-02-2023.   

‘ದೀಪಾವಳಿಯಲ್ಲಿ ಪಟಾಕಿ ಸದ್ದಿನಂತೆ ಎಲೆಕ್ಷನ್ ಸಮಯದಲ್ಲಿ ಸಿ.ಡಿಗಳು ಸದ್ದು ಮಾಡುತ್ತವೆ. ಈಗಾಗಲೇ ಸಿ.ಡಿಗಳು ಸಿಡಿಯಲು ಶುರುವಾಗಿವೆ. ಸಿ.ಡಿ ಸಂತ್ರಸ್ತರ ಪಾಡೇನಾಗುವುದೋ...’ ಎನ್ನುತ್ತಾ ಸುಮಿ ಟಿ.ವಿ ಆಫ್ ಮಾಡಿದಳು.

‘ಸಿ.ಡಿ ಬಾಧಿತರಿಗೆ ಶಾಂತಿಭಂಗ, ಮಾನಹಾನಿ, ವ್ಯವಹಾರ ಕಷ್ಟ, ಅಧಿಕಾರ ನಷ್ಟ, ಕುಟುಂಬ ಕಲಹ, ಸಿಟ್ಟು, ಸಂಕಟದಿಂದ ಆರೋಗ್ಯ ಹಾನಿಯೂ ಆಗಬಹುದು’ ಅಂದ ಶಂಕ್ರಿ.

‘ಹೌದು, ಮಾತು ಮನೆ ಕೆಡಿಸಿದಂತೆ ಸಿ.ಡಿ ಸಂಬಂಧ ಕೆಡಿಸಿಬಿಡುತ್ತದೆ. ಅಣ್ಣ ತಮ್ಮಂದಿರಂತೆ ಇದ್ದವರೂ ಸಿ.ಡಿ ಸಹವಾಸದಿಂದ ಶತ್ರುಗಳಾಗುತ್ತಾರಂತೆ. ಶತ್ರು ದಮನಕ್ಕೂ ಸಿ.ಡಿ ಹರಿತ ಅಸ್ತ್ರವಾಗುತ್ತದೆ. ಅಧಿಕಾರದ ಹಾದಿಗೆ ಮುಳ್ಳಾಗುವವರನ್ನು ಮಟ್ಟಹಾಕಲು,
ಎದುರಾಳಿಗಳನ್ನು ಕಟ್ಟಿಹಾಕಿ ಅಡಿಯಾಳು ಮಾಡಿಕೊಳ್ಳಲು ಸಿ.ಡಿ ಸಮರ್ಥ ಸಾಧನ ಅಂತ ಸಿ.ಡಿ ಸಾಧಕರು ಹೇಳುತ್ತಾರೆ’.

ADVERTISEMENT

‘ಅಪಾಯಕಾರಿ ಸಿ.ಡಿಯೊಂದು ಸರ್ಕಾರ ವನ್ನೂ ಬೀಳಿಸಬಲ್ಲದು, ಪ್ರಭಾವಿಗಳನ್ನೂ ಫಜೀತಿಗೊಳಿಸಬಲ್ಲದು. ಕೆಲ ನಾಯಕರ
ಬಳಿ ಹತ್ತಾರು ಚುನಾವಣೆಗಳಲ್ಲಿ ಸಿಡಿಸುವಷ್ಟು ಸಿ.ಡಿ ಸರಕು ಸ್ಟಾಕ್ ಇದೆಯಂತೆ. ಹೆಚ್ಚು ಸಿ.ಡಿ ಹೊಂದಿದವರು ಬಲಿಷ್ಠ ನಾಯಕರಾಗುತ್ತಾರಂತೆ!’

‘ಈ ಸಿ.ಡಿ ಸಂಕಟ ಶಮನಕ್ಕೆ ಮದ್ದಿಲ್ಲವೇನ್ರೀ?’

‘ಸಿ.ಡಿ ಬಾಧೆಗೆ ಸಿ.ಡಿಯೇ ಮದ್ದು. ಸಿ.ಡಿಯನ್ನು ಸಿ.ಡಿಯಿಂದಲೇ ಗೆಲ್ಲಬೇಕು. ಸಿ.ಡಿಯ ಸೇಡಿಗೆ ಸಿ.ಡಿಯೇ ಅಸ್ತ್ರ ಎಂಬುದು ಸಿ.ಡಿ ಸಿದ್ಧಾಂತಿಗಳ ಸಿದ್ಧಾಂತ. ಚುನಾವಣೆ ಹತ್ತಿರವಾದಂತೆ ಇನ್ನಷ್ಟು ಸಿ.ಡಿಗಳು ಸಿಡಿಯಬಹುದು. ಆ ಸಿಡಿತಕ್ಕೆ ಯಾರ್‍ಯಾರು ಸಿಡಿದುಹೋಗುವರೋ, ಇನ್ಯಾರು ಸಿಡಿದೇಳುವರೋ ಕಾದು ನೋಡಬೇಕು...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.