ADVERTISEMENT

ಚುರುಮುರಿ | ಹುಲಿ ಲೆಕ್ಕ!

ಬಿ.ಎನ್.ಮಲ್ಲೇಶ್
Published 4 ಆಗಸ್ಟ್ 2023, 0:20 IST
Last Updated 4 ಆಗಸ್ಟ್ 2023, 0:20 IST
   

‘ತೆಪರ, ಏನಲೆ ಇವತ್ತಿನ್ ಸುದ್ದಿ? ರಾಜಕೀಯ ಬಿಟ್ಟು ಹೇಳು’ ಎಂದ ದುಬ್ಬೀರ.

‘ರಾಜಕೀಯ ಬಿಟ್ಟು ಅಂದ್ರೆ ಒಂದು ತುಪ್ಪದ್ದು, ಇನ್ನೊಂದು ಹುಲಿಗಳದ್ದು. ಮೊದಲು ಯಾವುದೇಳ್ಲಿ?’

‘ತುಪ್ಪದ್ದೇನು ಕತೆ?’

ADVERTISEMENT

‘ಇನ್ಮೇಲೆ ತಿರುಪತಿ ಲಡ್ಡಿನಲ್ಲಿ ಗುಜರಾತ್ ಘಮ... ಅಂದ್ರೆ ಅಮುಲ್ ತುಪ್ಪ ಹಾಕ್ತಾರಂತೆ’.

‘ನಮ್ ನಂದಿನಿ ತುಪ್ಪ ಯಾಕೆ ಬ್ಯಾಡಂತೆ?’

‘ನಮ್ ತುಪ್ಪ ನಮಗೇ ಸಾಲ್ತಿಲ್ಲಂತೆ. ಸರ್ಕಾರದೋರು ಸಾಲ ಮಾಡಿ ಜನರಿಗೆ ಗ್ಯಾರಂಟಿ ತುಪ್ಪ ತಿನ್ನಿಸ್ತಿದಾರೆ, ನೋಡ್ತಿಲ್ವಾ?’ ತೆಪರೇಸಿ ನಕ್ಕ.

ಗುಡ್ಡೆಗೆ ಸಿಟ್ಟು ಬಂತು. ‘ನಾವು ಸಾಲ ಮಾಡಿಯಾದ್ರೂ ಜನರಿಗೆ ತುಪ್ಪ ತಿನ್ನಿಸ್ತಿದೀವಿ. ನಿಮ್ ಸರ್ಕಾರದೋರು ಬರೀ ಜನರ ಮೂಗಿಗೆ ತುಪ್ಪ ಹಚ್ತಿದ್ರು ನೆನಪೈತಾ?’ ಎಂದ.

‘ಥೋ... ರಾಜಕೀಯ ಬ್ಯಾಡಾಂದ್ರೂ ಮತ್ತೆ ಅಲ್ಲಿಗೇ ಬರ್ತೀರಲ್ಲಲೆ, ಲೇ ತೆಪರ, ತುಪ್ಪ ಬಿಡು, ಹುಲಿಗಳ ಕತೆ ಏನು ಹೇಳು’ ಎಂದ ದುಬ್ಬೀರ.

‘ಹುಲಿಗಳ ಸುದ್ದಿನಾ? ನಮ್ ರಾಜ್ಯದಲ್ಲಿ ಹುಲಿ ಸಂಖ್ಯೆ 563 ಆಗೇತಂತೆ. ಹೆಂಗೆ ನಮ್ ಸರ್ಕಾರದ ಸಾಧನೆ?’ ಎಂದ ತೆಪರೇಸಿ.

‘ಹಲೋ... ಸ್ವಲ್ಪ ಬಾಯಿ ಮುಚ್ಕಳಿ, ಅಲ್ಲಿ ಕುನೋ ಅರಣ್ಯದಲ್ಲಿ ಒಂಬತ್ತು ಚೀತಾ ಸತ್ತವಲ್ಲ, ಅದೂ ನಿಮ್ ಸರ್ಕಾರದ್ದೇ ಸಾಧನೆ. ಆ ಲೆಕ್ಕ ಯಾರು ಕೊಡ್ತಾರೆ?’ ಗುಡ್ಡೆ ಕೇಳಿದ.

‘ಸಾಧನೆ ಹಂಗಿರ್ಲಿ, ನನ್ ಪ್ರಕಾರ ಹುಲಿಗಳ ಲೆಕ್ಕ ತಪ್ಪು’ ಎಂದ ಕೊಟ್ರೇಶಿ.

‘ತಪ್ಪಾ? ಹೆಂಗೆ?’

‘ಆ ಹುಲಿಗಳ ಲೆಕ್ಕಕ್ಕೆ ನಮ್ ರಾಜಾಹುಲಿ, ವಿಜಾಪುರದ ಹುಲಿ, ಟಗರುಹುಲಿ, ಬಂಡೆಹುಲಿ ಇವೆಲ್ಲ ಸೇರಿದಾವಾ?’

‘ಕರೆಕ್ಟ್, ಹಂಗ್ ನೋಡಿದ್ರೆ ನಮ್ ಗುಡ್ಡೆನೂ ಹುಲಿನೇ. ಅದೂ ಲೆಕ್ಕಕ್ಕೆ ಸೇರ್ಬೇಕು!’ ದುಬ್ಬೀರ ನಕ್ಕ.

‘ಹೌದ್ಹೌದು, ಗುಡ್ಡೆ ಬೀದೀಲಿ ಹುಲಿ, ಮನೇಲಿ ಇಲಿ!’ ತೆಪರೇಸಿ ಕಿಸಕ್ಕೆಂದ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.