ADVERTISEMENT

ಚುರುಮುರಿ: ಭಂಡಗೇಡಿಗಳು

ಸುಮಂಗಲಾ
Published 20 ಡಿಸೆಂಬರ್ 2020, 19:31 IST
Last Updated 20 ಡಿಸೆಂಬರ್ 2020, 19:31 IST
CHURUMURI-21-Dec-2020
CHURUMURI-21-Dec-2020   

ಬೆಕ್ಕಣ್ಣ ಬಲು ಗಂಭೀರವಾಗಿ ಒಎಲ್ಎಕ್ಸ್‌ನಲ್ಲಿ ಏನೋ ಹುಡುಕುತ್ತಿತ್ತು. ‘ಏನಲೇ... ಬೆಳಗ್ಗೆಬೆಳಗ್ಗೆ ಸೆಕೆಂಡ್ ಹ್ಯಾಂಡ್ ಖರೀದಿ ನಡಿಸೀಯಲ್ಲ’ ಎಂದೆ.

‘ರಾಹುಲಣ್ಣನ ಆಫೀಸೇನಾರ ಮಾರಾಟಕ್ಕೆ ಐತೇನು ಅಂತ ನೋಡಾಕಹತ್ತೇನಿ’ ಎನ್ನುತ್ತ ವಾರಾಣಸಿಯಲ್ಲಿರುವ ಪ್ರಧಾನಿಯವರ ಕಚೇರಿಯ ಫೋಟೊ ಕ್ಲಿಕ್ಕಿಸಿ, ಮಾರಾಟಕ್ಕಿದೆ ಎಂದು ಒಎಲ್ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದ ಸುದ್ದಿ ತೋರಿಸಿತು. ‘ಮೋದಿಮಾಮನ ಆಫೀಸೇ ಮಾರಾಟಕ್ಕೆ ಇಟ್ಟಾರಂದ್ರ ಎಷ್ಟ್ ಧೈರ್ಯ ಅಂತೀನಿ... ಹಂಗೇ ಈ ಕಾಂಗಿಗಳ ಆಫೀಸೇನಾರೂ ಮಾರಾಟಕ್ಕೆ ಇಟ್ಟಾರೇನಂತ ನೋಡಾಕ ಹತ್ತಿದ್ದೆ’ ಎಂದಿತು.

‘ಕಾಂಗಿಗಳ ಆಫೀಸು ಅವರಿಗೇ ವಜ್ಜೆಯಾಗೈತಿ, ದೂಳು ಜಾಡಿಸೋರು ಗತಿಯಿಲ್ಲದಂಗೆ ಆಗೈತಿ... ಪುಕಟ್ ಕೊಡ್ತೀನಿ ಅಂದ್ರೂ ಯಾರೂ ತಗೊಳ್ಳಂಗಿಲ್ಲ ಬಿಡಲೇ’ ಎಂದು ರೇಗಿಸಿದೆ.

ADVERTISEMENT

‘ಅದೂ ಖರೇ. ಅದಕ್ಕೇ ನೋಡ್... ನಮ್ಮ ಕುಮಾರಣ್ಣ ಎಷ್ಟ್ ಶಾಣೇ ಅದಾನಂತ. ಆವಾಗ ಕಮಲಕ್ಕನಿಗೆ ಠೂ ಬಿಟ್ಟಿದ್ದೇ ತಪ್ಪಾತು, ನಾವಿನ್ನು ತಪ್ಪಿನೂ ಕಾಂಗಿಗಳ ಕೈ ಮುಟ್ಟಂಗಿಲ್ಲ, ಇನ್ ಮ್ಯಾಗೆ ತೆನಿ ಹೊತ್ತ ಮಹಿಳೆ ರಾಗಿ ತೆನಿ ಬಿಸಾಕಿ, ಕಮಲದ ಹೂ ಹೊರತಾಳ ಅಂದಾನ. ಸುಮ್ಮನೆ ಕುತ್ರ ನಾಳೆ ತನ್ನ ಆಫೀಸೂ ಹೀಂಗೆ ಮಾರಾಟಕ್ಕೆ ಇಡತಾರ ಅಂತ ಗೊತ್ತಾಗೈತಿ ಅಂವಂಗ’ ಎಂದು ಕುಮಾರಣ್ಣನ ಗುಣಗಾನ ಮಾಡಿತು.

‘ಪಟೇಲ್ಮಾಮಾನ ಏಕತಾ ಪ್ರತಿಮೆನೂ ಯಾರೋ ಹಿಂಗ ಏಪ್ರಿಲ್ವಳಗ ಒಎಲ್‌ಎಕ್ಸಿನೊಳಗಮಾರಾಟಕ್ಕೆ ಇಟ್ಟಿದ್ರಂತ. ಮಂದಿ ಎಷ್ಟರ ಭಂಡಗೆಟ್ಟಾರ ಅಂತೀನಿ’ ಎಂದೆ.

‘ಜಲಸಂಪನ್ಮೂಲ ಇಲಾಖೇಲಿ ನೀರಾವರಿ ಕಾಮಗಾರಿಯಲ್ಲಿ ನೂರಾರು ಕೋಟಿ ಅವ್ಯವಹಾರ ಮಾಡಿ ಗುಳುಂ ಮಾಡ್ಯಾರಂತ. ಹಿಂತಾವೆಲ್ಲ ಚರ್ಚೆ ಮಾಡಬೇಕಾದ ಮೇಲ್ಮನೆಯೋರು ಜುಟ್ ಹಿಡ್ಕಂಡು ಕಿತ್ತಾಡತಾರ. ಡೆಲ್ಲಿವಳಗ ಕುತ್ತೋರು ಅ ಅಂದ್ರ ಅದಾನಿ, ಅಂ ಅಂದ್ರ ಅಂಬಾನಿ ಅಂತ ರೈತರ ಕೈಗೆ ಹೊಸ ವರ್ಣಮಾಲೆ ಪುಸ್ತಕ ತುರಕಾಕ ಹತ್ಯಾರ...ವಟ್ಟಾರೆ ಭಂಡಗೇಡಿಗಳ ದೇಶ ಆಗೈತಿ ನಮ್ಮದು’ ಎಂದು ಅಪರೂಪಕ್ಕೊಮ್ಮೆ ಬುದ್ಧಿವಂತಿಕೆಯ ಮಾತಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.