ADVERTISEMENT

ಚುರುಮುರಿ | ತಲೆಯೊಳಗೇ ಚಿಪ್‌

ಸುಮಂಗಲಾ
Published 21 ಮೇ 2023, 23:00 IST
Last Updated 21 ಮೇ 2023, 23:00 IST
   

‘ಎರಡ್‌ ಸಾವಿರದ ಪಿಂಕ್ ನೋಟಿದ್ರೆ, ಅದ್ರಾಗಿನ ಚಿಪ್‌ ಮಾತ್ರ ತೆಕ್ಕಂಡು, ಮದ್ಲು ಹೋಗಿ ಬ್ಯಾಂಕಿನಾಗೆ ಬದಲಿ ಮಾಡಿಕೋ’ ಬೆಕ್ಕಣ್ಣ ಸುದ್ದಿ ಓದುತ್ತ ವದರಿತು.

‘ನನ್ನ ಹತ್ರ ನೋಟೂ ಇಲ್ಲ, ನೋಟೊಳಗೆ ಚಿಪ್ಪೂ ಇಲ್ಲ. ಆವಾಗ ಎರಡು ಸಾವಿರದ ನೋಟು ಪ್ರಿಂಟ್‌ ಮಾಡಿದ್ದೇ ಭ್ರಷ್ಟಾಚಾರ ಕಂಟ್ರೋಲ್‌ ಮಾಡಾಕೆ, ಎಲ್ಲಾ ಕಪ್ಪುಹಣ ಹೊರಗೆ ಬರತೈತೆ ಅಂದಿದ್ದರಲ್ಲ... ಈಗ್ಯಾಕೆ ಮೋದಿಮಾಮ ನೋಟು ಹಿಂದೆ ತಗಂಡಾರಂತೆ?’

‘ಆವಾಗ ಕಂಟ್ರೋಲ್‌ ಮಾಡಿದರು. ಈಗ 2000ದ ನೋಟು ಹಿಂದೆ ತಗಂಡು ಕಪ್ಪುಹಣ ಪೂರಾ ಬಂದ್‌ ಮಾಡತಾರೆ. ಕಪ್ಪುಹಣ,
ಭ್ರಷ್ಟಾಚಾರಕ್ಕೆ ಗೇಟ್‌ಪಾಸ್‌, ತಿಳೀತಿಲ್ಲೋ’ ಬೆಕ್ಕಣ್ಣ ಹೊಸದೇ ವಿತಂಡವಾದ ಹೂಡಿತು.

ADVERTISEMENT

‘2000ದ ಒಂದು ನೋಟು ಪ್ರಿಂಟ್‌ ಮಾಡಾಕೆ ಮೂರೂವರೆ ರೂಪಾಯಿ ಬೇಕಂತೆ. ಒಟ್ಟು ₹ 1,293 ಕೋಟಿ ಖರ್ಚು ಮಾಡಿ, ಹೊಸಾ ನೋಟು ಪ್ರಿಂಟ್‌ ಮಾಡಿ, ಈಗ ಹಿಂದೆ ತಗಂಡರೆ ಎಷ್ಟ್‌ ರೊಕ್ಕ ಹಾಳು’.

ಬೆಕ್ಕಣ್ಣ ನನ್ನ ಮಾತು ಕಿವಿಗೇ ಹಾಕಿಕೊಳ್ಳದೆ, ‘ಸಿದ್ದು ಅಂಕಲ್ಲು ಗೃಹಲಕ್ಷ್ಮಿಯರಿಗೆ 2 ಸಾವಿರ ಕೊಡ್ತೀನಿ ಅಂದಾರಲ್ಲ... 2 ಸಾವಿರದ ನೋಟೇ ಮಾಯವಾದ್ರೆ ಮತ್ತ ಎಲ್ಲಿಂದ ಕೊಡತಾರೆ?’ ಎಂದು ಹಲ್ಲು ಕಿಸಿಯಿತು.

‘ಮಂಗ್ಯಾನಂಥವನೇ… ಅಕೌಂಟಿಗೆ ಹಾಕ್ತಾರಲೇ’.

‘ಗೃಹಲಕ್ಷ್ಮಿಯರಿಗೇನೋ ಸರ್ಕಾರ ಕೊಡತೈತಿ. ನನಗ ಯಾರು ರೊಕ್ಕ ಕೊಡತಾರ? ಅದಕ್ಕೇ ಟಿ.ವಿಯವರಿಗೆ ಹೆಡ್‌ಲೈನ್ ಬರೆದುಕೊಟ್ಟು, ರೊಕ್ಕ ಮಾಡತೀನಿ’ ಎನ್ನುತ್ತ ಬೆಕ್ಕಣ್ಣ ಬರೆಯತೊಡಗಿತು.

‘ಡಬ್ಬಲ್‌ ಎಂಜಿನ್‌ ಬೇಡವೆಂದ ಕರುನಾಡಿಗರಿಗೆ ಡಬ್ಬಲ್‌ ಶಾಕ್’, ‘ಎತ್ತು ಏರಿಗೆ, ಕೋಣ ನೀರಿಗೆ ಎಳೆಯುವ ಜೋಡೆತ್ತುಗಳು’, ‘ಜೋಡೆತ್ತುಗಳ ಜಂಗೀಕುಸ್ತಿ’, ‘ಸಂಪುಟ ವಿಸ್ತರಣೆ ಕರ್ಮಕಾಂಡ’, ‘ಭುಗಿಲೆದ್ದ ಅತೃಪ್ತಿಯ ಬೆಂಕಿ’.

‘ಅವ್ರು ಈಗಾಗ್ಲೇ ಇಂಥವನ್ನು ವದರಲಾಕೆ ಹತ್ಯಾರ’ ಎಂದು ಟಿ.ವಿ. ಹಾಕಿ ತೋರಿಸಿದೆ.

‘ನೋಟೊಳಗೆ ಅಲ್ಲ, ಇವ್ರ ತಲೆಯೊಳಗೇ ಚಿಪ್‌ ಹಾಕಿದಂಗೆ ಐತಿ’ ಎಂದು ಬೆಕ್ಕಣ್ಣ ಹ್ಯಾಪುಮೋರೆ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.