ADVERTISEMENT

ಚುರುಮುರಿ: ಸಂಕ್ರಾಂತಿ ಫಲಗಳು

ಲಿಂಗರಾಜು ಡಿ.ಎಸ್
Published 15 ಜನವರಿ 2024, 23:18 IST
Last Updated 15 ಜನವರಿ 2024, 23:18 IST
ಕಕಲಕ
ಕಕಲಕ   

ಸಂಕ್ರಾಂತಿ ಪುರುಷನು ಆಯುಧಗಳನ್ನು ಹಿಡಿದಿದ್ದು, ದೇಶಗಳ ನಡುವಿನ ಯುದ್ಧವು ದೇಶದ ಜನರ ಬದುಕಿನ ಮೇಲೆ ತೀವ್ರ ಪ್ರಭಾವ ಬೀರಲಿದೆ. ಉತ್ತರ ದಿಕ್ಕಿಗೆ ಶುಭ ಫಲ, ದಕ್ಷಿಣಕ್ಕೆ ಅನುದಾನ ಖೋತಾ, ಗಳಿಕೆ ಮಧ್ಯಮ. ಸಂಕ್ರಾಂತಿ ಪುರುಷನಿಗೆ ನವಕರವಿದ್ದು ಕಳ್ಳ-ಸುಳ್ಳ ಅಧಿಕಾರಿಗಳಿಗೆ ಅನುಕೂಲವು. ಲೋಕ ಸೆಣಸಾಟದಲ್ಲಿ ಗಾಂಧಿ ಮಂತ್ರ, ರಾಮ ಜಪ ಶುಭ ಫಲ ತಂದಾವು. ಮಣಿಪುರದಲ್ಲಿ ಗೊಂದಲಗಳು ಮುಂದುವರಿಯುವುವು. ಅರುಣಾಚಲದಲ್ಲಿ ಡ್ರಾಗನ್ ಕಾಟವು. ಉಗ್ರವಾದಿ ಗಳಿಗೆ ತೀವ್ರ ಹಿನ್ನಡೆಯಾಗಲಿದೆ. ದೇಶದ ಕುಸ್ತಿಪಟುಗಳು ಅಕಾರಣವಾಗಿ ಚಿತ್ತಾಗುವರು. ವಿರೋಧ ಪಕ್ಷಗಳ ಮುಸುಕಿನ ಗುದ್ದಾಟದಿಂದ ದಿಲ್ಲಿ ಮಹಾರಾಜರಿಗೆ ಪಕ್ಷ ಸೌಖ್ಯ ಹೆಚ್ಚಲಿದೆ.

ಭವಿಷ್ಯದ ದಿನಗಳ ಸೋಲಾಯಮಾನ ಸ್ಥಿತಿಯ ನಿರೀಕ್ಷೆಯಿಂದ ರಾಜ್ಯ ನಾಯಕರುಗಳಿಗೆ ಚಿಂತೆಯು. ಅಧಿಕಾರದ ಕನವರಿಕೆಯಲ್ಲಿ ನಿದ್ರೆ ನಾಸ್ತಿ. ತೆನೆ-ಕಮಲಗಳ ಸಾತಿವ್ರತ್ಯಕ್ಕೆ ಕಠೋರ ಪರೀಕ್ಷೆಯು. ಕೇಂದ್ರ ಮಂತ್ರಿ ನಿರೀಕ್ಷೆಯಲ್ಲಿ ಪಿತೃಪಕ್ಷವಿದ್ದರೆ ಮಾತೃಪಕ್ಷಕ್ಕೆ ಕಷ್ಟದ ದಿನಗಳು ಎದುರಾಗಲಿವೆ. ಗ್ಯಾರಂಟಿಗಳ ಹೊಂಗನಸಲ್ಲಿ ಇರುವ ರಾಜಕಾರಣಿಗಳಿಗೆ ರೈತರ ಹಾಗೂ ಜನರ ಕೂಗು ಇಂಪಾದ ಸಂಗೀತದಂತೆ ಕೇಳಿಸೀತು. ಡಿಸಿಎಂ ಆಕಾಂಕ್ಷಿಗಳ ನಿರಂತರ
ಡ್ರಾಮಾವತಾರದಿಂದ ಪಕ್ಷಕ್ಕೆ ಮಾನಹಾನಿ. ವಿರೋಧಿ ಗಣಗಳು ಪರಸ್ಪರ ಕತ್ತು ಕೊಯ್ದಾಟದಲ್ಲಿ ಮಗ್ನವಾಗಿರುತ್ತವೆ.

ಜನಸಾಮಾನ್ಯರು ನಾನಾ ವಿದೇಶಿ ಕಾಯಿಲೆ ಗಳಿಂದ ನರಳುವರು. ದುಬಾರಿಯಾಗುವ ಔಷಧಿ ಬೆಲೆಗಳಿಂದ ತಯಾರಕರು ನೆಮ್ಮದಿ ಹೊಂದುವರು. ಕಾಪಿಟ್ಟ ಹಣಕ್ಕೆ ಸೈಬರ್ ದುರುಳರು ಕನ್ನ ಹಾಕುವ ಪ್ರವೃತ್ತಿ ಮುಂದುವರಿಯಲಿದೆ. ಲಂಚವು ಭೀಕರ ರೂಪ ತಾಳಲಿದೆ. ಭ್ರಷ್ಟರ ತನಿಖೆಗಳಿಗೆ ಸರ್ಕಾರದ ನಿರಾಕರಣಾ ವ್ಯಾಧಿ ಮುಂದುವರಿಯಲಿದೆ. ಜನೋಪಯೋಗಿ ಕಾರ್ಯಗಳು ಸಾಡೆಸಾತಿಯ ಪ್ರಭಾವದಿಂದ ಸ್ಥಗಿತಗೊಳ್ಳಲಿವೆ. ಗ್ರಹರಾಶಿಯ ಪ್ರಕಾರ ಗುರುವು ಒಂದನೇ ಮನೆಯಲ್ಲಿರುವು
ದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.