ADVERTISEMENT

ಚುರುಮುರಿ: ‘ಪೆನ್‌ಡ್ರೈವ್’ ಲೀಡರ್!

ಗುರು ಪಿ.ಎಸ್‌
Published 9 ಆಗಸ್ಟ್ 2023, 23:30 IST
Last Updated 9 ಆಗಸ್ಟ್ 2023, 23:30 IST
   

‘ನಿಮ್ ಪಾರ್ಟಿಯವರೆಲ್ಲ ಯಾಕ್ಹಿಂಗೆ? ತಾವೂ ಕೆಲಸ ಮಾಡಲ್ಲ, ನಮ್ ನಾಯಕರಿಗೂ ಕೆಲಸ ಮಾಡೋಕೆ ಬಿಡ್ತಿಲ್ಲ’ ವಿಜಿಗೆ ಬೈಯ್ಯತೊಡಗಿದ ಮುದ್ದಣ್ಣ.

‘ಕೆಲಸ ಮಾಡೋಕೆ ನಿಮ್ ನಾಯಕ ರೆಡಿ ಇದ್ದರೆ ತಾನೇ ಬಿಡೋಕೆ’ ಕಾಲೆಳೆದ ವಿಜಿ ಮುಂದುವರಿದು ಕೇಳಿದ, ‘ಅದ್ ಸರಿ, ಯಾವ ಕೆಲಸ ಮಾಡೋಕೆ ಬಿಡ್ತಿಲ್ಲ ನಾವು?’

‘ಏನೂ ಮಾಡೋಕೆ ಬಿಡ್ತಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡೋಣ ಅಂದ್ರೆ ವಿರೋಧ ಮಾಡಿದ್ರಿ, ರೈಲ್ವೆ ಮಾರೋಕೆ ಬಿಡ್ಲಿಲ್ಲ, ಬಿಎಸ್ಎನ್ಎಲ್ ಮಾರೋಕೂ ಬಿಡ್ತಿಲ್ಲ’ ಸಿಟ್ಟಲ್ಲಿ ಹೇಳಿದ ಮುದ್ದಣ್ಣ.

ADVERTISEMENT

‘ಥೋ ಎಲ್ಲ ಮಾರೋದೇ ಹೇಳ್ತೀಯಲ್ಲ, ನಮ್ ಲೀಡರ್ಸ್ ಥರ ಕಟ್ಟೋದು ಹೇಳು’.

‘ನಿಮ್ ಒಕ್ಕೂಟಕ್ಕೆ ಇಂಡಿಯಾ ಅಂತೇನೋ ಹೆಸರಿಟ್ಕೊಂಡಿದೀರಿ, ನಮ್ಮ ನಾಯಕನಂಥ ಒಬ್ಬೇ ಒಬ್ಬ ಲೀಡರ್ ಇಲ್ಲ ನಿಮ್ಮ ಹತ್ತಿರ. ನಿಮ್ ಒಕ್ಕೂಟ ಒಂಥರಾ ‘ಟೀಂ ಇಂಡಿಯಾ’ ಇದ್ದಂಗೆ. ಒಂದೊಂದು ಸೀರೀಸ್‌ಗೆ ಒಬ್ಬೊಬ್ಬರನ್ನ ಕ್ಯಾಪ್ಟನ್ ಮಾಡ್ತಿರೋ ಹಾಗೆ, ಒಂದೊಂದು ಭಾಗಕ್ಕೆ ಒಬ್ಬೊಬ್ಬರನ್ನ ಪ್ರೈಮ್ ಮಿನಿಸ್ಟರ್ ಕ್ಯಾಂಡಿಡೇಟ್ ಅಂತ ಅನೌನ್ಸ್ ಮಾಡಿಬಿಡಿ, ಚೆನ್ನಾಗಿರುತ್ತೆ’ ಅಣಕಿಸಿದ ಮುದ್ದಣ್ಣ.

‘ಸಾಕ್ ಸುಮ್ನಿರಪ್ಪ, ಕರ್ನಾಟಕದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಿಕೊಳ್ಳೋಕೆ ಆಗಿಲ್ಲ ನಿಮಗೆ’ ಕಾಲೆಳೆದ ವಿಜಿ.

‘ನಿನಗೆ ಗ್ರಹಿಕೆ ಸಮಸ್ಯೆ ಇದ್ದಂತಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡ್ಕೊಳೋಕೆ ನಮಗೆ ಸಾಮರ್ಥ್ಯ ಇಲ್ಲ ಅಂತಲ್ಲ, ನಮ್ಮ ಆಯ್ಕೆ ಪ್ರಕ್ರಿಯೆ ಅಷ್ಟೊಂದು ಕಠಿಣ ಎಂದರ್ಥ. ಪಕ್ಷ, ದೇಶದ ಬಗ್ಗೆ ಧ್ಯೇಯ, ನಿಷ್ಠೆ ಇಟ್ಕೊಂಡವರನ್ನ ಹುಡುಕ್ತಿದೀವಿ ನಾವು’.

‘ನಿಮ್ಮ ಪಾರ್ಟಿಗೆ ಲೀಡರ್ ಆಗಬೇಕು ಅಂದ್ರೆ ಧ್ಯೇಯ, ನಿಷ್ಠೆ ಜೊತೆಗೆ ಮತ್ತೊಂದು ಇಟ್ಕೊಂಡಿರಬೇಕು ಅನಿಸುತ್ತೆ’.

‘ಏನು?’

‘ಪೆನ್‌ಡ್ರೈವ್’!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.