ADVERTISEMENT

ಚುರುಮುರಿ: ಆನಂದ... ಪ್ರಜ್ಞಾನಂದ

ಕೆ.ವಿ.ರಾಜಲಕ್ಷ್ಮಿ
Published 29 ಆಗಸ್ಟ್ 2023, 0:48 IST
Last Updated 29 ಆಗಸ್ಟ್ 2023, 0:48 IST
   

ಮನೆಯಲ್ಲಿ ಹಬ್ಬದ ವಾತಾವರಣ. ‘ಆನಂದ... ಪ್ರಜ್ಞಾನಂದ’ ನನ್ನವಳು ರಾಗವಾಗಿ ಹಾಡುತ್ತಿದ್ದಳು.

‘ಒಳ್ಳೆ ಮೂಡ್‌ನಲ್ಲಿ ಇರೋ ಹಾಗಿದೆ’ ಎಂದೆ, ಜಿಹ್ವೆಗೆ ರುಚಿಯಾಗಿ ಏನಾದರೂ ಬೀಳುವುದೇ ಎಂಬ ಆಸೆಯಿಂದ.

‘ಅಲ್ವೇ ಮತ್ತೆ, ನಮ್ಮ ಸಾಧನೆಯೇನು ಕಡಿಮೇನೇ? ಪ್ರಜ್ಞಾನ್, ಚಂದ್ರನ ಅಂಗಳದಲ್ಲಿ ನಲಿದಾಡ್ತಿರೋದು ದೊಡ್ಡ ವಿಕ್ರಮ ಅಲ್ವೇ?’

ADVERTISEMENT

‘ಜೊತೆಗೆ ಪ್ರಜ್ಞಾನಂದನ ಸಾಧನೆ! ಇಡೀ ವಿಶ್ವವೇ ನಮ್ಮತ್ತ ನೋಡ್ತಿದೆ’ ಪುಟ್ಟಿಯ ಗಮನ ಚೆಸ್‌ನತ್ತ.

‘ಚಂದ್ರಯಾನವಾಗಲೀ ಚದುರಂಗವಾಗಲೀ ನಡಿಗೆಯ ಸಾಮರ್ಥ್ಯ ಮುಖ್ಯ. ಅಲ್ಲಿ ವಿಕ್ರಮ್ ಲ್ಯಾಂಡರ್‌ನ ನಡಿಗೆಯಾಗಲೀ, ಇಲ್ಲಿ ಕಾಯಿ ನಡೆಸೋದಾಗಲೀ, ಅಡೆತಡೆಗಳನ್ನು ಮೆಟ್ಟಿ ಗುರಿ ಮುಟ್ಟಿರೋದು ಶ್ಲಾಘನೀಯ’ ಅತ್ತೆಯ ವಿಶ್ಲೇಷಣೆ.

‘ವಿಪರೀತ ಸೆಕೆ’ ಎನ್ನುತ್ತಾ ಕಂಠಿ ಬಂದ.

‘ಅದಕ್ಕೇನಂತೆ ಫ್ಯಾನ್ ಹಾಕಿದರಾಯ್ತು, ಹೇಗೂ ಜೀರೋ ಬಿಲ್ಲು, ಈ ತಿಂಗಳು ಅರ್ಹ ಯುನಿಟ್‌ಗಳಿಗಿಂತ ಕಡಿಮೆ ಬಳಕೆಯಾಗಿದೆ, ಕರೆಂಟ್ ಸ್ವಲ್ಪ ಧಾರಾಳವಾಗಿ ಬಳಸಬಹುದು’ ಎಂದಳು ನನ್ನವಳು ಹೆಮ್ಮೆಯಿಂದ.

‘ಬಾಸ್ ಮನೆಗೆ ಅಡುಗೆಯವರನ್ನು ಒಪ್ಪಿಸಿಯಾಯ್ತು, ಹೇಗೂ ಫ್ರೀ ಪಾಸ್ ಇರೋದ್ರಿಂದ ಪ್ರಯಾಣಭತ್ಯೆ ಪ್ರತ್ಯೇಕವಾಗಿ ಕೊಡಬೇಕಿಲ್ಲ ಅಂತ ಮೊದಲೇ ಸಲಹೆ ಕೊಟ್ಟಿದ್ದರಿಂದ ಬಾಸ್ ಮಿಸೆಸ್ ಫುಲ್ ಖುಷ್’.

‘ಅಂದ್ಹಾಗೆ ನಿಮ್ಮ ಸಮಾಜದ ಪ್ರೆಸಿಡೆಂಟ್ ಸರೋಜಾ ಮನೆ ವಿಷಯ ಗೊತ್ತಾಯ್ತಾ?’ ಕಂಠಿಯ ಮಾತಿಗೆ ಮೈಯೆಲ್ಲ ಕಿವಿಯಾಯಿತು ನನ್ನವಳಿಗೆ. ಮಹಿಳಾ ಸಮಾಜದಲ್ಲಿ ಆಕೆಯ ವಿರೋಧಿ!

‘ಬಳಸಿದ ಯುನಿಟ್‌ಗಳು 204, ಜಸ್ಟ್ ಮಿಸ್, ಫ್ರೀ ಯುನಿಟ್‌ಗಳಿಂದ ವಂಚಿತೆ. ಜೀರೋ ಬಿಲ್ ಭಾಗ್ಯವಿಲ್ಲ ಅಂತ ಮನೆಯವರ ಮೇಲೆಲ್ಲಾ ಎಗರಾಡ್ತಿದ್ದಾರಂತೆ’.

ನನ್ನವಳ ಮುಖದಲ್ಲಿ ಹೊಸ ಮಿಂಚು. ಶತ್ರುವಿನ ಸಂಕಟ ಇವಳಿಗೆ ಸಂತಸ.

‘ಸಮಾಜದಲ್ಲೂ ಹಾಗೇ... ಮುಂದಾಲೋಚನೆ ಇಲ್ದೆ ಏನೇನೋ ಮಾಡೋಕ್ಕೆ ಹೋಗಿ ಸದಸ್ಯರಿಂದ ಮಂಗಳಾರತಿ ಮಾಡಿಸ್ಕೊತಾರೆ. ಇರಲಿ, ಅವರ ವಿಷಯ ನಮಗ್ಯಾಕೆ? ಬೋಂಡಾ ಕರಿದು, ಸಜ್ಜಿಗೆ ಮಾಡ್ತೀನಿ, ಮನೆಗೂ ತೊಗೊಂಡು ಹೋಗುವಿರಂತೆ’ ಎನ್ನುತ್ತಾ ಅಡುಗೆಮನೆಯತ್ತ ನಡೆದಳು ನನ್ನವಳು.

‘ಆನಂದ... ಪರಮಾನಂದ’ ನಾನೂ ರಾಗವೆಳೆದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.