ADVERTISEMENT

ಚುರುಮುರಿ: ಅಕ್ರಮ- ಸಕ್ರಮ!

ತುರುವೇಕೆರೆ ಪ್ರಸಾದ್
Published 29 ಜುಲೈ 2022, 19:30 IST
Last Updated 29 ಜುಲೈ 2022, 19:30 IST
Churumuri==30072022
Churumuri==30072022   

‘ಅಲ್ಲ ಕಣ್ರೋ, ಸರ್ಕಾರವೇ ಅಕ್ರಮನ ಸಕ್ರಮ ಮಾಡಕ್ ಹೊರ್ಟಿದೆಯಲ್ಲ, ಇದು ಸರೀನಾ?’ ಕಲ್ಲೇಶಿ ಮಾತು ತೆಗೆದ.

‘ಸರ್ಕಾರ ಹೇಳಿದ್ದೇ ಸತ್ಯ, ಮಾಡಿದ್ದೇ ಸರಿ ಅಂತ ಬೋ ಇಂದೇನೆ ಬೇಂದ್ರೆ ಅಜ್ಜ ಹೇಳವ್ರಲ್ಲಪ್ಪ’ ಎಂದ ಈರಭದ್ರ.

‘ನೀನ್ ಏನೇ ಯೋಳು, ಇದ್ಯಾಕೋ ಸರಿ ಅನ್ಸಕಿಲ್ಲ, ಕಾನೂನು ಮಾಡೋದು, ಅದನ್ನ ಭಂಗ ಮಾಡಿದೋರನ್ನ ಕ್ಷಮ್ಸಿ ಸಕ್ರಮ ಮಾಡೋದು. ಇದೆಂತ ರಾಜ್ಯಭಾರ ಅಂತೀನಿ’.

ADVERTISEMENT

‘ಎಲ್ಲಾ ದುಡ್ಡಿಗೋಸ್ಕರ! ಖಜಾನೆ ಬರಿದಾಗಲೆಲ್ಲಾ ಸರ್ಕಾರಗಳು ಇರೋ ಆಸ್ತಿ ಮಾರೋದು, ಅಕ್ರಮ– ಸಕ್ರಮ ಮಾಡೋದು, ಇಂತ ಸ್ಟಾಕ್‍ಕ್ಲಿಯರ್ ಸೇಲ್ ಹಮ್ಮಿಕೊಳ್ಳುತ್ವೆ’ ಅಂದ ಪರ್ಮೇಶಿ.

‘ದುಡ್ಡಿಗೋಸ್ಕರ ತಪ್ಪನ್ನ ಸರಿ ಮಾಡೋದು ಮತ್ತೂ ದೊಡ್ಡ ತಪ್ಪಲ್ವಾ?’

‘ತಪ್ ಎಂಗಾಯ್ತದೆ? ಜಾತ್ಕ ಸರಿ ಇಲ್ಲ, ಶನಿ, ಕುಜ ದೋಷ ಅಂದ್ರೆ ಜ್ಯೋತಿಷಿಗಳಿಗೆ ದುಡ್ ಕೊಟ್ಟು ಎಂಗ್ ಬೇಕೋ ಅಂಗೆ ಉಚ್ಚ ನಕ್ಷತ್ರ, ಗ್ರಹನೆಲ್ಲಾ ತಲೆ ಮೇಲೆ ಕೂರಿಸ್ಕೊಂಡು ಬೇರೆ ಜಾತಕ ಬರ್ಸಿ ಸಕ್ರಮ ಮಾಡ್ಕಳಕಿಲ್ವಾ? ಗ್ರಹಗತಿನೇ ಅಕ್ರಮ-ಸಕ್ರಮ ಮಾಡ್ಕಬಹುದು ಅಂದ್‌ಮ್ಯಾಕೆ ಇದ್ಯಾವ ಲೆಕ್ಕ ಬಿಡು’.

‘ಇಂಗೇ ಮಾಡ್ತಿದ್ರೆ ಇದಕ್ಕೆ ಕೊನೆ ಮೊದ್ಲೇ ಇರಾಕಿಲ್ಲ ಬಿಡು. ಕೆರೆ ನುಂಗಿ ಮಾಡಿದ ನಿವೇಶನ, ಬಿಲ್ಡಿಂಗು ಎಲ್ಲಾ ಸಕ್ರಮ ಮಾಡುದ್ರೆ ಜನ ಮತ್ ಮತ್ ತಪ್ ಮಾಡಕಿಲ್ವಾ?’

‘ಮಾಡ್ತಾರೆ. ಯಥಾ ರಾಜಾ ತಥಾ ಪ್ರಜಾ! ಸರ್ಕಾರಗಳ ಲಂಚದ ಪರ್ಸಂಟೇಜ್ ಏರ್ದಂಗೆ ಜನಗಳ ಅಕ್ರಮ ಪರ್ಸೆಂಟೇಜೂ ಜಾಸ್ತಿಯಾಗ್ತಾನೇ ಇರುತ್ತೆ’.

‘ಅಂಗ್ ಆಗ್ಬಾರ್ದು ಅಂದ್ರೆ ಆಡಳಿತ ಯಂತ್ರದ ಅಕ್ರಮನೇ ಸಕ್ರಮ ಮಾಡ್ಬೇಕಾಯ್ತದೆ. ಕಟ್ ಮನಿ, ಲಂಚ ಘೋಷಣೆ ಮಾಡ್ಕಂಡು ಇಷ್ಟು ಲಕ್ಷ ಅಂತ ದಂಡ ಕಟ್ಟುಸ್ಕೊಂಡ್ ಮುಂದೆ ಅದನ್ನೂ ಸಕ್ರಮ ಮಾಡ್ಬಹುದಲ್ಲ’.

‘ಅಂಗೇನಾದ್ರೂ ಮಾಡ್‍ಬುಟ್ರೆ 40 ಪರ್ಸೆಂಟ್, 60 ಪರ್ಸೆಂಟ್ ಕಮಿಷನ್ ಅಂತ ಯಾರೂ ದೂರೋ ಅಂಗೇ ಇಲ್ಲ’.

‘ಮತ್ತೆ ಎಸಿಬಿ, ಲೋಕಾಯುಕ್ತಗಳ ಗತಿ?’

‘ಎರಡನ್ನೂ ಸೇರಿಸಿ ಮದ್ಯಪಾನ ಸಂಯಮ ಮಂಡಳಿ ತರ ‘ಲಂಚ ಸಂಯಮ ಮಂಡಳಿ’ ಅಂತ ಮಾಡಿ ಕೈ ತೊಳ್ಕೊಳೋದು’ ಹುಬ್ಬು ಹಾರಿಸಿ ನಕ್ಕ ಪರ್ಮೇಶಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.