ADVERTISEMENT

ಚುರುಮುರಿ: ಕುರ್ಚಿ ಕನಸುಗಳು

ಸುಮಂಗಲಾ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
   

ಬೆಕ್ಕಣ್ಣ ಕೈಕೈ ಹೊಸಕಿಕೊಳ್ಳುತ್ತ, ‘ಎಂಥಾ ಛಂದ ಕನಸು ಕಂಡಿದ್ದೆ, ಎಲ್ಲ ಚೂರುಚೂರಾತು’ ಎಂದಿತು.

‘ನನಸಾಗೂ ಅಂತ ಕನಸು ಮಾತ್ರ ಕಾಣಬೇಕಲೇ’.

‘ನೀ ಗಾಯದ ಮ್ಯಾಗೆ ಉಪ್ಪು ಎರಚಬ್ಯಾಡ. ನಮ್‌ ಕುಮಾರಣ್ಣಂಗಾಗಿ ಉಪಪ್ರಧಾನಿ ಕುರ್ಚಿ ಹೊಸದಾಗಿ ಮಾಡಿಸ್ತಾರೆ, ಕುಮಾರಣ್ಣ ಮಂಡ್ಯದಿಂದ ಗೆದ್ದವನೇ ಸೀದಾ ಹೋಗಿ ಮೋದಿಮಾಮನ ಪಕ್ಕ ಕೂರತಾನೆ ಅಂತ ಕನಸು ಕಂಡಿದ್ದೆ. ಅಂವಾ ಗೆದ್ದು, ಕೇಂದ್ರದಾಗೆ ಕೃಷಿ ಮಂತ್ರಿಯಾಗತೀನಿ ಅಂತ ಕೃಷಿ ಕುರ್ಚಿಗೆ ಕರ್ಚೀಪು ಹಾಸ್ಯಾನೆ’ ಎಂದು ನಿಟ್ಟುಸಿರಿಟ್ಟಿತು.

ADVERTISEMENT

‘ಉಪಪ್ರಧಾನಿ ಕುರ್ಚಿ ಹೊಸದಾಗಿ ಮಾಡೂದು ಸರಳ ಇಲ್ಲಲೇ. ಕೇಂದ್ರ ಕೃಷಿ ಮಂತ್ರಿ ಅಂದರೆ ರಗಡ್‌ ಕಿಮ್ಮತ್‌ ಇರತೈತಿ’ ಎಂದು ಸಮಾಧಾನಿಸಿದೆ.

‘ಅದೂ ಖರೇ. ದೇಗೌಅಜ್ಜಾರು ಮಣ್ಣಿನ ಮಗ, ಹಿಂಗಾಗಿ ಮಣ್ಣಿನ ಮೊಮ್ಮಗ ನಮ್ ಕುಮಾರಣ್ಣ ಕೃಷಿ ಮಂತ್ರಿಯಾದರೆ ಛಲೋ ಆಗತೈತಿ’.

‘ಅಂವಾ ಕೃಷಿ ಮಂತ್ರಿಯಾದರೆ ನಮ್ಮ ರೈತರಿಗೆ ಕೇಂದ್ರದಿಂದ ಬರಬೇಕಿರೋ ಸವಲತ್ತು, ನಮ್ಮ ತೆರಿಗೆ ಪಾಲು ಕೊಡಿಸಾಕೆ ಏನ್‌ ಪ್ಲಾನ್‌ ಮಾಡ್ಯಾನಂತೆ? ಗೊತ್ತೈತಿಲ್ಲೋ… ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಹೋಗೋ 100 ರೂಪಾಯಿ ತೆರಿಗೆಯಲ್ಲಿ ಬರೇ 12 ರೂಪಾಯಿ ನಮಗೆ ವಾಪಸ್ ಕೊಡತಾರೆ’.

‘ಮೊದಲು ಕೃಷಿ ಮಂತ್ರಿಯಾಗೂದು, ಕಮಲಕ್ಕನ ಮನಿಯವ್ರ ಜೊತೆ ಸೇರಿ ಇಲ್ಲಿ ಕಾಂಗಿಗಳನ್ನ ಕೆಳಗಿಳಿಸೂದು… ಡಬ್ಬಲ್‌ ಎಂಜಿನ್‌ ಸರ್ಕಾರದ ಪ್ಲಾನ್! ತೆರಿಗೆ ಪಾಲು, ಸವಲತ್ತು ಇವೆಲ್ಲ ಜನರೇ ಸ್ವಂತ ನೋಡಿಕೋಬೇಕು!’

‘ಮತ್ತ ನಿಮ್ಮ ಕಂಗನಾಕ್ಕ ಗೆದ್ದ ಮ್ಯಾಗೆ ಯಾವ ಕುರ್ಚಿ ಮ್ಯಾಗೆ ಕೂಡತಾಳಂತೆ?’ ಕುತೂಹಲದಿಂದ ಕೇಳಿದೆ.

‘ಆಕಿ ಎಜುಕೇಶನ್‌ ಮಿನಿಸ್ಟರ್‌ ಆದರೆ ವಳ್ಳೇದು. ನಮ್‌ ದೇಶಕ್ಕೆ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, ನಮ್‌ ದೇಶದ ಮೊದಲ ಪ್ರಧಾನಿ ಸುಭಾಷ್‌ಚಂದ್ರ‌ ಬೋಸ್, ಹಿಂಗೆ ಆಕಿ ಕಂಡುಹಿಡಿದ ಎಲ್ಲಾ ಹೊಸ ಸತ್ಯಗಳನ್ನು ಪಠ್ಯಪುಸ್ತಕದಾಗೆ ಸೇರಿಸೂದು ಸುಲಭ ಆಗತೈತಿ’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.