ADVERTISEMENT

ಚುರುಮುರಿ: ದೇಶಪ್ರೇಮದ ಕುಸ್ತಿ

ಸುಮಂಗಲಾ
Published 5 ಜೂನ್ 2023, 0:52 IST
Last Updated 5 ಜೂನ್ 2023, 0:52 IST
   

‘ನೀ ಇನ್ನು ಮೂರೂ ಹೊತ್ತು ಬಸ್ಸಿನಾಗೆ ಅಡ್ಡಾಡಬೌದು ನೋಡು. ಕಾಸಿಲ್ಲ, ಖರ್ಚಿಲ್ಲ… ಎಲ್ಲಾ ಹೆಣ್‌ ಮಕ್ಕಳಿಗೂ ಸಿದ್ದು ಅಂಕಲ್ಲು ಫ್ರೀ ಬಸ್ಸುಭಾಗ್ಯ ಕೊಟ್ಟಾರೆ. ಇನ್‌ ಬಸ್ಸೊಳಗೆ ಬರೇ ಹೆಣ್‌ ಮಕ್ಕಳೇ ತುಂಬಿರತಾರ’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

‘ಸುಮ್‌ ಸುಮ್ನೆ ಬಸ್ಸೊಳಗ ಅಡ್ಡಾಡಾಕೆ ಹೆಣ್‌ ಮಕ್ಕಳಿಗೆ ಬ್ಯಾರೆ ಕೆಲಸ ಇಲ್ಲೇನು? ಎಷ್ಟೋ ಮನಿವಳಗೆ ಹೆಣ್‌ ಮಕ್ಕಳು ಕೆಲಸ ಮಾಡತಾರ ಅಂತ್ಹೇಳಿ ಒಲಿಯೊಳಗೆ ಬೆಂಕಿ ಉರೀತೈತಿ’ ನಾನು ರೇಗಿದೆ.

‘ಪ್ರಚಾರದ ಟೈಮಿನಾಗೆ ಎಲ್ಲಾ ಗ್ಯಾರಂಟಿ ಅಂದೋರು ಈಗ ಏನೇನೋ ಷರತ್ತು ಹಾಕ್ಯಾರೆ. ಈ ಕೈಪಕ್ಷದೋರು ಕೈಕೊಡಾಕೆ ಮುಂದು. ಆವಾಗ ನಮ್‌ ಮೋದಿ ಮಾಮ ನೋಟು ಹಿಂದೆ ತೆಕ್ಕೊಂಡಾಗ ಯಾವುದೇ ಷರತ್ತಿಲ್ಲದೆ ಎಲ್ಲರ ಬ್ಯಾಂಕ್‌ ಅಕೌಂಟಿಗೆ ಹದಿನೈದು ಲಕ್ಷ ಹಾಕ್ತೀವಿ ಅಂದಿದ್ದರು’ ಎಂದು ನೆನಪಿಸಿಕೊಂಡಿತು.

ADVERTISEMENT

‘ಆದರೆ ಯಾರಿಗೂ ಹಾಕಲಿಲ್ಲವಲ್ಲ’.

‘ಅದೇ ನಾನೂ ಹೇಳದು, ಯಾವುದೇ ಷರತ್ತಿಲ್ಲದೆ ಎಲ್ಲಾರಿಗೂ ಹಾಕ್ತೀವಿ ಅಂದಿದ್ರು, ಹಾಕದೇ ಇರಕ್ಕೂ ಯಾವುದೇ ಷರತ್ತು ವಿಧಿಸಿರಲಿಲ್ಲ’ ಎಂದು ವಿತಂಡವಾದ ಹೂಡಿದ ಬೆಕ್ಕಣ್ಣ ಮುಂದಿನ ಸುದ್ದಿಗೆ ಹಾರಿತು.

‘ಈ ಕುಸ್ತಿಪಟುಗಳಿಗೆ ಪ್ರತಿಭಟನೆ ನಡೆಸಾಕೆ ವಿದೇಶದಿಂದ ರೊಕ್ಕ ಬರತೈತಿ ಅಂತ ನಮ್‌ ಶೋಭಕ್ಕ ಹೇಳ್ಯಾಳ. ಬರೇ ದೇಶದ್ರೋಹದ ಕುಸ್ತಿ ಆಡತಾರ’ ಎಂದಿತು.

‘ಅಲ್ಲಲೇ... ಆ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಅಷ್ಟೆಲ್ಲ ಮಹಿಳಾ ಕುಸ್ತಿಪಟುಗಳ ಮ್ಯಾಗೆ ಲೈಂಗಿಕ ದೌರ್ಜನ್ಯ ನಡೆಸ್ಯಾನಲ್ಲ, ಅವನ ರಕ್ಷಣೆಗೂ ವಿದೇಶಿ ನಿಧಿ ಹರಿದುಬರತೈತಾ ಅಥವಾ ಇಲ್ಲಿ ಮಂದಿನೇ ಅವನ ರಕ್ಷಣೆ ಮಾಡಾಕೆ ಹತ್ಯಾರಂತಾ? ಅಷ್ಟ್‌ ಮಂದಿ ಮಹಿಳಾ ಕುಸ್ತಿಪಟುಗಳು ಕಣ್ಣೀರು ಹಾಕಿದ್ರೂ ಇನ್ನಾ ಅವನನ್ನ ಬಂಧಿಸಿಲ್ಲ’.

‘ಆತೇಳು... ಮುಂದಿನ ಒಲಿಂಪಿಕ್ಸ್‌ಗೆ ನೀನೇ ದೇಶಪ್ರೇಮದಿಂದ ಕುಸ್ತಿ ಆಡಿ ಪದಕ ಗೆಲ್ಲಪ್ಪಾ ಅಂತ ಅವನನ್ನೇ ಕಳಿಸೂಣು’ ಎಂದು ಬೆಕ್ಕಣ್ಣ ಹುಳ್ಳಗೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.