‘ನಮ್ಮ ಫ್ರಿಜ್ ಇಎಂಐ ಅಂತೂ ಮುಗೀತಾ ಬಂತು ರೀ, ಮೆಸೇಜ್ ಬಂದಿದೆ ನೋಡಿ’ ಮಡದಿ ಮೊಬೈಲ್ ಮುಂದೆ ಹಿಡಿದಳು- ಮೊದಲ ಲಿಸ್ಟಲ್ಲೇ ಟಿಕೆಟ್ ಸಿಕ್ಕ ಆಕಾಂಕ್ಷಿಯಷ್ಟು ಖುಷಿಯಾಗಿ. ‘ಈ ಇಎಂಐ ಕಡೆ ಸ್ವಲ್ಪ ಗಮನ ಹರಿಸ್ತೀಯಾ. ಮ್ಯಾಂಗೋ ಇಎಂಐ ಅಂತ ಹೊಸ ಸ್ಕೀಮ್ ಬಂದಿದೆ!’
‘ತಮಾಷೆಗೂ ಒಂದು ಮಿತಿ ಇರ್ಲಿ, 52 ಹೊಸ ಮುಖಗಳಿಗೆ ಟಿಕೆಟ್ ಕೊಟ್ಟು ಬಿಜೆಪಿ ಅಚ್ಚರಿ ಮೂಡಿಸಿರಬಹುದು, ಆದರೆ ಮ್ಯಾಂಗೊ ಖರೀದಿಗೆ ಇಎಂಐ ಅಂದ್ರೆ ನಾನು ನಂಬಲ್ಲ’.
‘ಏನ್ಮಾಡತಾರೆ ಹೇಳು? ಮಾವಿನ ಹಣ್ಣಿನ ಬೆಲೆ ಗಗನಕ್ಕೇರಿದೆ. ಇನ್ನೂರು, ಮುನ್ನೂರು ರೂಪಾಯಿ ಇದ್ದ ಮಾವು ಐನೂರು, ಸಾವಿರಕ್ಕೇರಿದರೆ ಬೇವಿಗಿಂತಲೂ ಮಾವು ಕಹಿ ಅನಿಸಲ್ವೇ?! ಅದಕ್ಕೇ ಕಂತುಗಳಲ್ಲಿ ಮಾವು ನೀಡಿ ಬಡವರು, ಮಧ್ಯಮ ವರ್ಗದವರು, ನೌಕರದಾರರು ಮಾವಿನ ರುಚಿ ನೋಡಲಿ ಅಂತ...’
‘ಫ್ರಿಜ್‌ಗೇನೋ ಸರಿ, ಫ್ರಿಜ್‌ನಲ್ಲಿ ಇಡೋ ವಸ್ತುಗಳಿಗೂ ಇಎಂಐನಾ?!
‘ಆ... ಇಎಂಐ... ಈಕ್ವೇಟೆಡ್ ಮಂತ್‌ಲಿ ಇನ್‌ಸ್ಟಾಲ್‌ಮೆಂಟ್’. ಆದರೆ, ಇದು ಈಟ್ ಮ್ಯಾಂಗೊ ಇನ್‌ಸ್ಟಾಲ್ಮೆಂಟಲಿ ಅಂತ!
‘ಹೋ, ಇದು ನಿಮ್ಮ ವ್ಯಾಖ್ಯಾನವೋ’ ಮಡದಿ ಕುಟುಕಿದಳು. ‘ಅಲ್ಲಾರೀ ಯಾಕೋ ಚುನಾವಣಾ ಆಕಾಂಕ್ಷಿಗಳು, ಅಭ್ಯರ್ಥಿಗಳು ಕುಕ್ಕರ್, ಮೊಬೈಲ್‌ಗಳ ಜೊತೆ ಮ್ಯಾಂಗೊ ಆಮಿಷಾನೂ ಒಡ್ಡಿಲ್ಲವಲ್ಲ?’
‘ಒಡ್ಡಬಹುದು, ಮಾವು ಎಷ್ಟೇ ಅಂದರೂ ಹಣ್ಣುಗಳ ‘ರಾಜ’ ಅಲ್ವಾ? ರಾಜಕಾರಣದವರು ರಾಜಕೀಯಕ್ಕೂ ಎಳೆದು ತರಬಹುದು’.
‘ಕುಕ್ಕರ್ ಹಂಚಿ, ಅದು ಬ್ಲಾಸ್ಟ್ ಆಗಿ ಪುಣ್ಯಕ್ಕೆ ಯಾವ ಹೆಣಾ ಬೀಳದೆ ಬಚಾವಾದರಂತಲ್ಲ, ಪೇಪರ್‌ನಲ್ಲಿ ಬಂದಿತ್ತು. ಹಾಗೇ... ಸಾವಿರ ರೂಪಾಯಿಯ ಹಣ್ಣಿಗೆ ಎರಡು ಸಾವಿರದ ಸ್ಟಿಕ್ಕರ್ ಅಂಟಿಸಿ, ಹಂಚಿ ಮತ ಕೇಳಬಹುದು’.
‘ನೀತಿ ಸಂಹಿತೆ ಜಾರಿ ಆದರೂ ಅನೀತಿ ವ್ಯವಹಾರ ಅನಿಯಮಿತವಾಗಿ ನಡೆದೇ ಇದೆ. ಅದಿರಲಿ, ನಮ್ಮ ಮುದ್ದಿನ ಮಾವಿನ ಹಣ್ಣು ಹೀಗೆ ಮರದಿಂದ ಆಕಾಶಕ್ಕೆ ನೆಗೀಬಾರದಾಗಿತ್ತು’.
‘ನಿಧಾನಕ್ಕೆ ಹೇಳಿ, ಫ್ರಿಜ್ಜಲ್ಲಿಡೋ ಕೊತ್ತಂಬರಿ ಸೊಪ್ಪೂ ಕೇಳಿಸ್ಕೊಂಡುಬಿಟ್ಟೀತು’!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.