ADVERTISEMENT

ಚುರುಮುರಿ | ಎಲೆಕ್ಷನ್ ಅಸ್ತ್ರ

ಮಣ್ಣೆ ರಾಜು
Published 1 ಮಾರ್ಚ್ 2023, 22:45 IST
Last Updated 1 ಮಾರ್ಚ್ 2023, 22:45 IST
   

‘ಎಲೆಕ್ಷನ್‍ಗೆ ಅಸ್ತ್ರ ಬಳಸುತ್ತೇವೆ ಅಂತ ಕೆಲವು ರಾಜಕಾರಣಿಗಳು ಹೇಳಿಕೊಂಡಿದ್ದಾರೆ. ಅಸ್ತ್ರ ಬಳಸಿ ಹೋರಾಡಲು ಎಲೆಕ್ಷನ್ ಏನು ಯುದ್ಧವೇನ್ರೀ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಯುದ್ಧ ಮಾಡಿ ರಾಜ್ಯ ಗೆಲ್ಲುವ ಸ್ಥಿತಿ ಬಂತೇನ್ರೀ’ ಕೇಳಿದಳು ಸುಮಿ.

‘ಅದು ಮಾರಣಾಂತಿಕ ಅಸ್ತ್ರವಲ್ಲ, ಮಾನಹರಣ ಅಸ್ತ್ರ. ಪ್ರತಿಸ್ಪರ್ಧಿಗಳ ಮಾನ ಕಳೆದು ಮುಖಭಂಗ ಮಾಡಿ, ಮತದಾರರ ಮನ ಗೆಲ್ಲುವ ಅಸ್ತ್ರ. ಭ್ರಷ್ಟಾಚಾರ, ದುಷ್ಟಾಚಾರ, ಸಿ.ಡಿ ಹಗರಣ, ಲಂಚ ಪ್ರಕರಣ, ಬಾಡೂಟ, ಕೆಟ್ಟಾಟಗಳು ಪರಿಣಾಮಕಾರಿ ಅಸ್ತ್ರಗಳಂತೆ’.

‘ರಾಜಕಾರಣಿಗಳೇ ಪರಸ್ಪರ ಬಾಣ ಬಿಟ್ಟುಕೊಂಡರೆ ಪ್ರಯೋಜನವಿಲ್ಲ,
ಮತದಾರರ ಮೇಲೆ ಸಮ್ಮೋಹನಾಸ್ತ್ರ ಪ್ರಯೋಗಿಸಬೇಕು, ಅವರಿಗೆ ನಾಟುವಂತಹ ಭರವಸೆಯ ಬಾಣ ಬಿಡಬೇಕು ಅಲ್ವೇನ್ರೀ?’

ADVERTISEMENT

‘ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಮಾಡ್ತೀವಿ ಅನ್ನೋ ಬಾಣ ಬಿಡುತ್ತಿದ್ದಾರಲ್ಲಾ’.

‘ನೀರು, ಚರಂಡಿ ಎಲ್ಲಾ ಎಲೆಕ್ಷನ್‍ಗಳಲ್ಲಿ ಬಳಕೆಯಾಗಿ ಮೊಂಡಾಗಿರುವ ಅಸ್ತ್ರ. ಪಡಿತರ ಅಕ್ಕಿ ಪ್ರಮಾಣ ಜಾಸ್ತಿ ಮಾಡ್ತೀವಿ, ಮನೆ ಬಾಗಿಲಿಗೆ ಆಂಬುಲೆನ್ಸ್ ಕಳಿಸ್ತೀವಿ ಅನ್ನೋ ಬದಲು ಆಂಬುಲೆನ್ಸ್‌ನಲ್ಲಿ ಡಾಕ್ಟರನ್ನೇ ಮನೆ ಬಾಗಿಲಿಗೆ ಕಳಿಸ್ತೀವಿ ಅಂತ ಭರವಸೆ ನೀಡಬೇಕು’.

‘ಜನರಿಗೆ ಅಷ್ಟೊಂದು ಸಲುಗೆ ಕೊಟ್ಟರೆ ನಮ್ಮ ಹಳ್ಳಿಗೂ ರೈಲು ಬಿಡಿ, ವಿಮಾನ ನಿಲ್ದಾಣ ಮಾಡಿ ಅಂತ ಕೇಳ್ತಾರೆ, ಮದುವೆಯಾಗಲು ರೈತರ ಮಕ್ಕಳಿಗೆ ವಧು ಸಿಗ್ತಿಲ್ಲ ಅಂತಾರೆ, ಹೆಣ್ಣು ಹುಡುಕಿ ಮದುವೆ ಮಾಡ್ತೀವಿ ಅಂತ ರಾಜಕಾರಣಿಗಳು ಭರವಸೆ ಕೊಡಲಾಗುತ್ತಾ?’

‘ಚುನಾವಣೆ ಗೆಲ್ಲಬೇಕೆಂದರೆ ಕೊಡಲೇ ಬೇಕು. ಎಲೆಕ್ಷನ್‍ನಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಎಲ್ಲಿ ಈಡೇರಿಸಿದ್ದಾರೆ ಹೇಳ್ರೀ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.