ADVERTISEMENT

ಚುರುಮುರಿ: ತ್ಯಾಗರಾಜಾ ಹುಲಿ!

ಚಂದ್ರಕಾಂತ ವಡ್ಡು
Published 25 ಜುಲೈ 2022, 19:30 IST
Last Updated 25 ಜುಲೈ 2022, 19:30 IST
Churumuri 26072022
Churumuri 26072022   

ಅಡುಗೆ ಮನೆಯಿಂದ ಎಂದಿನ ಗೊಣಗಾಟ ಕೇಳದೆ ಗಾಬರಿಯಾಗಿದ್ದ ತಿಂಗಳೇಶ, ಮಡದಿ ಮುಖಕ್ಕೆ ಮಾಸ್ಕ್ ಧರಿಸಿದ್ದನ್ನು ಕಂಡು ಇನ್ನಷ್ಟು ವಿಚಲಿತನಾದ.

‘ಏನಾಯ್ತು…? ಜ್ವರ ಇದೆಯಾ? ನೆಗಡಿ…? ಗಂಟಲು ಕೆರೆತ? ವಾಸನೆ ಗೊತ್ತಾಗುತ್ತಾ…?’

ತಿಂಗಳೇಶನ ಯಾವ ಪ್ರಶ್ನೆಗೂ ಮೌನ ಮುರಿಯದ ಹೆಂಡತಿ ಅಡುಗೆ ಕೆಲಸದಲ್ಲಿ ನಿರತಳು. ಅಪ್ಪನ ಎತ್ತರದ ದನಿ ಕೇಳಿ ಹತ್ತಿರ ಬಂದ ಮಗ, ‘ಅಮ್ಮ ಮಾತಾಡಲ್ವಂತೆ… ಅದ್ಯಾರೋ ‘ಬಾಯಿ ಮುಚ್ಚಿಕೊಂಡು ಸುಮ್ಮನೆ ಕೆಲಸ ಮಾಡಬೇಕು’ ಅಂತ ಧಮಕಿ ಕೊಟ್ಟಿದ್ದನ್ನು ಟೀವಿಯಲ್ಲಿ ಕೇಳಿಸಿಕೊಂಡು ತಾನೂ ಪಾಲಿಸುತ್ತಿ ದ್ದಾಳೆ’.

ADVERTISEMENT

‘ಅಯ್ಯೋ ಅದು ಜಮೀರ್ ಭಾಯಿ ಮತ್ತು ಅವರ ಬಾಯಿಗೆ ಸಂಬಂಧಿಸಿದ್ದು, ನಿಮ್ಮ ತಾಯಿಗೆ ಏನಂತೆ? ತಮ್ಮದು ಕೈ ಪಕ್ಷ, ಬಾಯಿ ಪಕ್ಷ ಅಲ್ಲ. ಕೆಲಸ ಜಾಸ್ತಿ ಮಾಡ್ರಿ, ಕೈ ಕೆಸರಾದರೆ ಬಾಯಿ ಮೊಸರು ಅಂತ ಅಧ್ಯಕ್ಷರು ಕನಕಪುರ ಭಾಷೆಯಲ್ಲಿ ಹೇಳಿದ್ದಾರೆ. ಚಾಮರಾಜಪೇಟೆ ಭಾಯಿಗೆ ಸರಿಯಾಗಿ ಅರ್ಥವಾಗದೆ ‘ಬಾಯಿ ಕೆಸರಾದರೆ ಕೈ ಮೊಸರು’ ಅಂತ ಕೇಳಿಸಿಕೊಂಡು ಪದೇ ಪದೇ ಎಡವಟ್ಟಾಗುತ್ತಿದೆ. ಒಟ್ನಲ್ಲಿ ಕೈಯಿ, ಬಾಯಿ ಎಲ್ಲಾ ಕೆಸರುಮಯ ಆಗಿ ಅದರಲ್ಲಿ ಕಮಲ ಅರಳೋ ಹಾಗೆ ಕಾಣಿಸುತ್ತೆ…!’

‘ಈಗ ಅಮ್ಮನ ಕೈ ಮುಸುರೆಯಾಗಿವೆ; ಬಾಯಿಗೆ ಮೊಸರೂ ಇಲ್ಲ, ಬೆಣ್ಣೆನೂ ಇಲ್ಲ…’

ಇವರ ಮಾತುಗಳನ್ನು ಕೇಳಿ ರೋಸಿದ ತಾಯಿ ಕೊನೆಗೂ ಬಾಯಿ ಬಿಟ್ಟಳು: ‘ರಾಜ್ಯದಲ್ಲಿ ಏನೇನೋ ನಡೀತಿದೆ… ನಿಮಗೆ ಒಂದೂ ತಿಳಿಯೋದಿಲ್ಲ… ಅಪ್ಪ-ಮಗ ಇರೋದೇ ನನ್ನ ಆಡಿಕೊಳ್ಳೋದಕ್ಕೆ… ತ್ಯಾಗ ಅಂದ್ರೆ ಏನು ಗೊತ್ತೇನ್ರೀ…?’

‘ಹೋ… ಗೊತ್ತು ಗೊತ್ತು. ಸಭಾತ್ಯಾಗ, ಪ್ರಾಣತ್ಯಾಗ, ಅಧಿಕಾರತ್ಯಾಗ, ಶಸ್ತ್ರತ್ಯಾಗ… ಬೇಕಾದಷ್ಟು ತ್ಯಾಗಗಳಿವೆ. ತ್ಯಾಗರಾಜ ಮತ್ತು ಅವರ ಕೀರ್ತನೆಗಳೂ ಗೊತ್ತು. ಏನೀಗ…?’

‘ಎಲ್ಲಾ ಸರಿ. ನಿಮಗೆ ತ್ಯಾಗರಾಜಾ ಹುಲಿ ಗೊತ್ತಾ?’ ಈಗ ಬಾಯಿ ಮುಚ್ಚಿಕೊಳ್ಳುವ ಸರದಿ ತಿಂಗಳೇಶನದು. ‘ಅದೇರೀ… ಮಗ ನಿಗಾಗಿ ಶಿಕಾರಿಪುರ ಕ್ಷೇತ್ರತ್ಯಾಗ ಮಾಡಿದ ಹುಲಿ… ನಿಮಗೆ ಹುಲಿನೇ ಗೊತ್ತಿಲ್ಲಾ ಅಂದ್ರೆ ರಾಣೆಬೆನ್ನೂರಿನ ತ್ಯಾಗಮಯಿ ಕೋಳಿ ಹೇಗೆ ಗೊತ್ತಿರಲು ಸಾಧ್ಯ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.