ADVERTISEMENT

ಚುರುಮುರಿ | ಮೇಲ್ ಮನೆ

ಮಣ್ಣೆ ರಾಜು
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಮೇಲ್ಮನೆ ಅಷ್ಟೊಂದು ಎತ್ತರ ಇರುತ್ತೇನ್ರೀ, ಹಳ್ಳಿ ಹಕ್ಕಿ ವಿಶ್ವಣ್ಣ ಹತ್ತಲಾಗದಷ್ಟು?’ ಸುಮಿ ಕೇಳಿದಳು.

‘ಏನಿಲ್ಲ, ಹತ್ತಲು ಏಣಿ, ಮೆಟ್ಟಿಲು ಇರುತ್ತವೆ. ವಿಶ್ವಣ್ಣ ಹತ್ತುವಾಗ ವಿರೋಧ ಪಕ್ಷದ ನಾಯಕರು ಅವರ ಕಾಲು ಎಳೆದರಂತೆ’ ಅಂದ ಶಂಕ್ರಿ.

‘ವಿಪಕ್ಷದವರು ಇರೋದೇ ಕಾಲು ಎಳೆಯಲು ಅಂತ ವಿಶ್ವಣ್ಣನಿಗೆ ಗೊತ್ತಿರಲಿಲ್ಲವಂತಾ?’

ADVERTISEMENT

‘ಗೊತ್ತಿತ್ತಂತೆ, ವಿಪಕ್ಷದವರು ಕಾಲು ಎಳೆದರೂ ಸ್ವಪಕ್ಷದವರು ಕೈ ಹಿಡಿದು ಎತ್ತುತ್ತಾರೆ ಅಂತ ನಂಬಿಕೊಂಡಿದ್ದರು, ಯಾರೂ ಕೈ ಹಿಡಿಯಲಿಲ್ಲವಂತೆ’.

‘ಪಾಪ! ಅವರಿಗೆ ಮನೆ ಇಲ್ಲದಂತಾಯ್ತಲ್ಲ... ಮೇಲ್ಮನೆ ಅಲ್ಲದಿದ್ದರೂ ಕೆಳಮನೆ, ನಡುಮನೆಯ ವ್ಯವಸ್ಥೆನಾದ್ರೂ ಮಾಡಬೇಕೂರೀ’ ಸುಮಿಗೆ ಸಂಕಟವಾಯ್ತು.

‘ಮಾಡ್ತೀವಿ ಅಂತ ಮಾತು ಕೊಟ್ಟಿದ್ದಾರಂತೆ, ಕೊಟ್ಟ ಮಾತನ್ನು ಸಿಎಂ ತಪ್ಪುವುದಿಲ್ಲವಂತೆ’ ಅಂದ ಶಂಕ್ರಿ.

‘ಮಹಿಳೆಯರಿಗೆ ಸ್ಥಾನಮಾನ ಕೊಡ್ತೀವಿ ಅಂತ ಭಾಷಣ ಮಾಡುವ ನಾಯಕರು, ಅಧಿಕಾರ ಕೊಡುವ ವಿಷಯದಲ್ಲಿ ಮಹಿಳೆಯರನ್ನು ಕಡೆಗಣಿಸುವುದೂ ಮಾತಿಗೆ ತಪ್ಪಿದಂತೆ ಅಲ್ಲವೇನ್ರೀ?’

‘ಹೌದೌದು, ಮಾತಿಗೆ ತಪ್ಪುವುದು ದೊಡ್ಡ ತಪ್ಪು’.

‘ಈ ಸಾರಿ ಎಲ್ಲ ಪಕ್ಷಗಳೂ ಮೇಲ್ಮನೆ ಹತ್ತಲು ಮೇಲ್‍ಗಳನ್ನೇ ಆಯ್ಕೆ ಮಾಡಿ ಫೀಮೇಲ್‍ಗಳನ್ನು ಕೈಬಿಟ್ಟಿದ್ದಾರೆ’ ಸುಮಿಗೆ ಬೇಸರ.

‘ಮೇಲ್ಮನೆಗೆ ಅನುಭವಿಗಳು ಬೇಕು ಅಂತ ಮೇಲ್‍ಗಳನ್ನು ಆಯ್ಕೆ ಮಾಡಿದ್ದಾರಂತೆ’.

‘ಫೀಮೇಲ್‍ಗಳಿಗೆ ಅನುಭವ ಇಲ್ಲ ಅಂತನಾ?’ ಸುಮಿಗೆ ಸಿಟ್ಟು ಬಂತು.

‘ನನಗೇನೋ ಹಾಗೇ ಅನಿಸುತ್ತದೆ. ಸರ್ಕಾರ ಕೆಡವಿದ ಅನುಭವ, ಪ್ರಭಾವ ಫೀಮೇಲ್‍ಗಳಿಗೆ ಇದ್ದಂತಿಲ್ಲ...’

‘ಅಂದ್ರೆ, ಸರ್ಕಾರವನ್ನು ಬುಡಮೇಲು ಮಾಡುವಷ್ಟು ಸಾಮರ್ಥ್ಯ ಬೆಳೆಸಿಕೊಂಡರೆ ಫೀಮೇಲ್‍ಗಳಿಗೂ ಅಧಿಕಾರ ಸಿಗುತ್ತೆ ಅಂತನೇನ್ರೀ...?!’ ಟಿ.ವಿ ಆಫ್ ಮಾಡಿ ರಿಮೋಟ್ ಎಸೆದುಹೋದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.