ADVERTISEMENT

ಚುರುಮುರಿ: ವಿಧಾನ ಪೌರುಷತ್ತು

ಗುರು ಪಿ.ಎಸ್‌
Published 16 ಡಿಸೆಂಬರ್ 2020, 19:31 IST
Last Updated 16 ಡಿಸೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಥೂ.‌‌.. ನಮ್ ಲೀಡರ್‍ರು ನಮ್ ಊರಿನ ಮರ್ಯಾದೆ ಕಳದ್‌ಬಿಟ್ರು...’ ಟಿ.ವಿಯಲ್ಲಿ ‘ವಿಧಾನ ಪೌರುಷತ್ತಿ’ನ ಕಲಾಪ ನೋಡುತ್ತಾ ಬೇಸರದಲ್ಲಿ ಹೇಳ್ದ ಮುದ್ದಣ್ಣ.

‘ಸ್ಪೀಕರ್ ಚೇಂಜ್ ಆಗಬೇಕೆಂದರೆ ನಿಮ್ಮ ಲೀಡರ್‌ನಂಥ ಲೌಡ್ ಸ್ಪೀಕರ್‌ಗಳು ಬೇಕಾಯ್ತವೆ ಮುದ್ದಣ್ಣ...’ ಕಿಚಾಯಿಸಿದ ವಿಜಿ.

‘ಸಭಾಪತಿಯವ್ರನ್ನ ಬದಲಿಸೋಕೆ ಆಭಾಸಪತಿಯಂತೆ ಆಡಬೇಕಾ ಸಾರ್...’ ಸಿಟ್ಟಲ್ಲೇ ಮುದ್ದಣ್ಣ ಹೇಳ್ತಿದ್ದಂತೆ ಅದೇ ಲೀಡರ್ ಬಂದ್ರು. ಅವರನ್ನ ನೋಡ್ತಿದ್ದಂಗೆ ವರಸೆ ಬದಲಿಸಿದ ಮುದ್ದಣ್ಣ, ‘ಓ ಅಣ್ಣಾ, ಬನ್ನಿ ಬನ್ನಿ... ನಿಮ್ ಹೋರಾಟನ ಟೀವಿಲಿ ನೋಡ್ತಿದ್ವಿ. ಅದೆಂಥ ಗ್ರಿಪ್ ಇದೆ ನಿಮಗೆ. ಬೇರೆ ಪಾರ್ಟಿ ಲೀಡರ್ ಕಾಲರ್‌ನ ಅದೆಷ್ಟು ಟೈಟ್ ಆಗಿ ಹಿಡಿದಿದ್ರಣ್ಣ... ಅದೆಷ್ಟ್ ಚೆನ್ನಾಗಿ ತಳ್ತೀರಿ, ಅದೆಷ್ಟ್ ಚೆನ್ನಾಗಿ ಬೈತೀರಿ...’

ADVERTISEMENT

ವಿಜಿ ಅಚ್ಚರಿಯಿಂದ ಮುದ್ದಣ್ಣನನ್ನೇ ನೋಡ ತೊಡಗಿದ. ಲೀಡರ್ ಮೀಸೆ ತಿರುವುತ್ತ ನಿಂತ.

‘ನಿಮ್ ಪೌರುಷ ಕಂಡು ಕೊರೊನಾ ಕೂಡ ಓಡೋಗಿತ್ತು ಅನ್ಸುತ್ತಲ್ವಾ ಅಣ್ಣ. ಮಾಸ್ಕ್ ಕೂಡ ಹಾಕ್ದೆ ಹೋರಾಡಿದ್ರಿ...’ ಹೊಗಳಿಕೆ ಮುಂದುವರಿಸಿದ ಮುದ್ದಣ್ಣ.

‘ಅಷ್ಟ್ ಜನರಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ತಗುಲಿದ್ದರೆ ಇದೆ ಮಾರಿಹಬ್ಬ’ ಎಂದು ಮನಸಿನಲ್ಲೇ ಅಂದ್ಕೊಂಡ‌ ವಿಜಿ.

‘ಕೊರೊನಾ ಇದೆ ಅಂತ ದೆಹಲಿಯ ನಿಮ್ ಲೀಡರ್‌ಗಳು ಚಳಿಗಾಲದ ಅಧಿವೇಶನವನ್ನೇ ರದ್ದು ಮಾಡವ್ರಲ್ಲ ಸರ್...’ ಪ್ರಶ್ನೆ ಎಸೆದ ವಿಜಿ.

‘ಯಾವಾಗ ಏನು ನಡೆಸಬೇಕು, ಏನ್ ರದ್ದು ಮಾಡಬೇಕು ಅನ್ನೋದು ನಮ್ ನ್ಯಾಷನಲ್ ಲೀಡರ್ಸ್‌ಗೆ ಚೆನ್ನಾಗಿ ಗೊತ್ತು. ಮದುವೆ, ನಾಮಕರಣಕ್ಕೆಲ್ಲ ಪರ್ಮಿಷನ್‌ ಕೊಟ್ಟು ಜನರಿಗೆ ಅನುಕೂಲ ಮಾಡಿಲ್ವ...’ ಸಮರ್ಥಿಸಿಕೊಂಡ್ರು ಲೀಡರ್‍ರು.

‘ವಿಧಾನ ಪೌರುಷತ್ತನ್ನೇ ರದ್ದು ಮಾಡಿದ್ರೆ, ಜನರಿಗಾಗಿ ನೀವು ಇಷ್ಟು ಕಷ್ಟಪಡೋ ಅಗತ್ಯವೇ ಇರಲ್ಲ...’ ಕುರ್ಚಿಯ ಬುಡಕ್ಕೇ ಕೈ ಹಾಕ್ದ ವಿಜಿ.

ಮುದ್ದಣ್ಣನ ಕಡೆಗೆ ತಿರುಗಿದ ಲೀಡರ್, ‘ಇಂಥವರನ್ನೆಲ್ಲ ಯಾಕ್ರೀ ಜೊತೆಗಿಟ್ಟುಕೊಂಡಿದೀರಿ... ಇವರಿಗೂ ಆಪರೇಷನ್ ಮಾಡಿ, ಇಲ್ಲವೇ ಗಡಿಪಾರು ಮಾಡಿ...’ ಎನ್ನುತ್ತಾ ಸಿಟ್ಟಲ್ಲಿಯೇ ಕಾಲ್ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.