ADVERTISEMENT

ಚುರುಮುರಿ: ಆ ಪ್ರಶ್ನೆನೇ ಕೇಳಲಿಲ್ಲ!

ಸಿದ್ದಯ್ಯ ಹಿರೇಮಠ
Published 15 ಮಾರ್ಚ್ 2024, 23:48 IST
Last Updated 15 ಮಾರ್ಚ್ 2024, 23:48 IST
   

‘ನೀವು ಹೇಳಿದಂಗ ಒಂದೂ ಪ್ರಶ್ನೆ ಕೇಳಿಲ್ಲಲ್ರೀ ಸರ ಪರೀಕ್ಷೆದಾಗ?’ ರಸ್ತೆ ಮಧ್ಯೆ ಮಾಸ್ತರರನ್ನು ನಿಲ್ಲಿಸಿ ಕೇಳಿದ ಕೊಟ್ರೇಶಿ.

‘‍ಅಷ್ಟ್ಯಾಕ ಗಾಬರಿಯಾಗೀಯೋ ಕೊಟ್ರ? ಏನ್ ಪ್ರಾಬ್ಲಮ್ ಆತು? ಯಾವ ಪ್ರಶ್ನೆ ಕೇಳಬೇಕಿತ್ತು?’ ಮಾಸ್ತರು ಸಮಾಧಾನದಿಂದಲೇ ಪ್ರಶ್ನಿಸಿದರು.

‘ಪ್ರಚಲಿತದ ಬಗ್ಗೆ ಪರೀಕ್ಷೆ ಒಳಗ ಪ್ರಶ್ನೆ ಕೇಳೇ ಕೇಳತಾರ, ದಿನಾಲೂ ಪೇಪರ್ ಓದಬೇಕು, ಟಿ.ವಿ. ನೋಡತಿರಬೇಕು, ಬರೇ ಪುಸ್ತಕದಾಗಿನ ಹುಳಾ ಆಗಿರಬ್ಯಾಡ್ರಲೇ ಅಂತ ನೀವು ಹೇಳಿದ್ರಿ. ಮತ್ತ ಪರೀಕ್ಷೆದಾಗ ನಾವು ಅನಕಂಡಿದ್ ಪ್ರಶ್ನೇನ ಕೇಳಿಲ್ಲರೀ ಸರ’ ಹೇಳಿದ ಕೊಟ್ರೇಶಿ.

ADVERTISEMENT

‘ಯಾವ ಪ್ರಶ್ನೆ ಕೇಳಬೇಕಿತ್ತು ಅಂತ ಹೇಳು ನೀ ಮೊದಲು?’ ಮಾಸ್ತರ ಸಿಟ್ಟಿನಿಂದಲೇ ಗದರಿದರು.

‘ನೋಡ್ರೀ, ಎರಡು ತಿಂಗಳಿಂದ ಕರಿಮಣಿ ಮಾಲಿಕ ಯಾರು ಅಂತ ರೀಲ್ಸು, ಫೇಸ್‌ಬುಕ್ಕು, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪು ಸೇರಿ ಎಲ್ಲೆಡೆ ಚರ್ಚೆ ನಡದೈತಿ. ಆದ್ರ ಆ ಬಗ್ಗೆ ಒಂದ್ ಸಣ್ಣ ಕ್ವಶ್ಚನ್ನೂ ಇರಲಿಲ್ಲರೀ ಸರ’ ಜಾಗತಿಕ ಸಮಸ್ಯೆಯೇ ಉದ್ಭವಿಸಿದೆ ಎಂಬಂತೆ ಕೊಟ್ರ ವಿವರಿಸಿದ.

‘ಲೇ ಕೊಟ್ರ, ಕರಿಮಣಿ ಮಾಲಿಕ ಯಾರು ಅಂತ ಪ್ರಶ್ನೆ ಕೇಳಿದ್ರ ಅದಕ್ಕ ಉತ್ತರ ಏನ್ ಬರೀತಿದ್ಯಪಾ ಹೇಳು. ನೀನಲ್ಲ ಅಥವಾ ನಾನಲ್ಲ ಅಂತನೋ, ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ ಅಂತನೋ, ಯಾರಂತ ಗೊತ್ತಿಲ್ಲ ಅಂತನೋ ಬರೀತಿದ್ಯಾ ಇಲ್ಲ?’ ಮಾಸ್ತರ ಮರುಪ್ರಶ್ನೆ ಎಸೆದರು.

‘ಹೌದ್ರಿ, ನಾನಂತೂ ಅಲ್ಲ ಅಂತ ಉತ್ತರ ಬರೀಬೇಕಂತ ನಾವು ಫ್ರೆಂಡ್ಸ್ ಎಲ್ಲಾ‌ ಬಾಯಿಪಾಠ ಮಾಡಿದ್ವಿರೀ’ ವಿವರಿಸಿದ ಕೊಟ್ರ.

‘ಇಂಥಾ ಪ್ರಶ್ನೆಗಳಿಗೆ‌ ಸ್ಪಷ್ಟ ಉತ್ತರ ಸಿಗಂಗಿಲ್ಲ ಅಂತ ಬೋರ್ಡ್‌ನವರು ಅವುನ್ನ ಕೇಳಿರಂಗಿಲ್ಲ’
ಮಾಸ್ತರು ಸಮಜಾಯಿಷಿ ನೀಡಿದ್ದು ಕೊಟ್ರನಿಗೆ ಸಮಾಧಾನ ತಂದಂಗೆ ತೋರಲಿಲ್ಲ.

‘ಸರ... ಈ ಬೋರ್ಡ್‌ನವರಿಗೆ ತಮ್ಮದೇ ಗೊತ್ತಿಲ್ಲ, ಇನ್ನ ಬ್ಯಾರೇದೇನ್ ಗೊತ್ತಿರತೈತಿ ಬಿಡ್ರಿ. ಒಮ್ಮೆ 5, 8, 9, 11ನೇತ್ತಾಕ್ಕ ಬೋರ್ಡ್ ಎಕ್ಸಾಮ್ ಐತಿ ಅಂತಾರ, ಮರುದಿನ ಇಲ್ಲ ಅಂತಾರ, ಮತ್ತ ಐತಿ ಅಂತಾರ, ಆಮ್ಯಾಲೆ ಇಲ್ಲ ಅಂತಾರ. ಪಾಪ ಅವರಿಗೇ‌ ಅವರದು ಗೊತ್ತಿಲ್ಲ, ಇನ್ನ ಬ್ಯಾರೇದವರದು ಏನ್ ಕನ್‌ಫರ್ಮ್ ಇರತೈತಿ ಬಿಡ್ರಿ’ ಎನ್ನುತ್ತಲೇ... ‘ಕರಿಮಣಿ ಮಾಲಿಕ ನೀನಲ್ಲ...’ ಹಾಡನ್ನು ಗುನುಗುನಿಸುತ್ತಲೇ ಮನೆಯತ್ತ‌ ಸಾಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.