ADVERTISEMENT

ಚುರುಮುರಿ| ಹಳೇ ರೂಲ್ಸು!

ಬಿ.ಎನ್.ಮಲ್ಲೇಶ್
Published 24 ಮಾರ್ಚ್ 2023, 0:14 IST
Last Updated 24 ಮಾರ್ಚ್ 2023, 0:14 IST
   

‘ಶಾಂತಿ, ಶಿಸ್ತು!’ ಎಂದ ದುಬ್ಬೀರ.

ಹರಟೆಕಟ್ಟೆ ಸದಸ್ಯರೆಲ್ಲ ಥಟ್ಟಂತ ಮಾತು ನಿಲ್ಲಿಸಿ ದುಬ್ಬೀರನ ಕಡೆ ನೋಡಿದರು.

‘ಏನೋ ದುಬ್ಬೀರ, ಯಾವ್ಯಾವೋ ಹೊಸ ಹೊಸ ಪದ ಪ್ರಯೋಗ ಶುರು ಮಾಡೀಯಲ್ಲ, ಏನ್ಸಮಾಚಾರ?’ ಎಂದ ಗುಡ್ಡೆ ನಗುತ್ತ.

ADVERTISEMENT

‘ಲೇಯ್, ನಿಮಿಗೆಲ್ಲ ತಮಾಷಿನೇ... ಲೈಫ್‌ನಲ್ಲಿ ಸ್ವಲ್ಪ ಶಿಸ್ತು, ರೀತಿ ನೀತಿ ಕಲೀರಿ. ಹರಟೆಕಟ್ಟೆ ಅಂದ್ರೆ ಹೆಂಗೆಂಗೋ ಏನೇನೋ ಮಾತಾಡಿ ಎದ್ದು ಹೋಗೋದಲ್ಲ’.

‘ಮತ್ತೇನು?’

‘ಟೈಮಿಗೆ ಸರಿಯಾಗಿ ಬರ್ಬೇಕು, ಒಬ್ರು ಮಾತಾಡುವಾಗ ಮಧ್ಯ ಇನ್ನೊಬ್ರು ಬಾಯಿ ಹಾಕಬಾರ್ದು, ಗಾಂಚಾಲಿ ಎಲ್ಲ ಮಾಡಬಾರ್ದು’.

‘ಅಲ್ಲ, ನೀನ್ಯಾವ ಪೋತ್ಲಾಂಡಿ ಅಂತ ನೀನೇಳಿದಂಗೆ ನಾವು ಕೇಳ್ಬೇಕು? ನಾವು ಹರಟೆಕಟ್ಟೆಗೆ ಬರೋದು ನಮಿಗೆ ತಿಳಿದಿದ್ದು ನಾಕು ಮಾತಾಡಿ, ತರ್ಲೆ ಮಾಡಿ, ಬೈದು ಬೈಸ್ಕಂಡು, ನಕ್ಕು ಹಗುರಾಗೋಕೆ. ನೀನ್ಯಾವುದೋ ಹೊಸ ರೂಲ್ಸು ಹೇಳಿದ್ರೆ ಕೇಳ್ಬೇಕಾ?’ ತೆಪರೇಸಿಗೆ ಸಿಟ್ಟು ಬಂತು.

‘ನೋಡು ನೋಡು, ಹಿಂಗೆಲ್ಲ ಏರು ಧ್ವನೀಲಿ ಮಾತಾಡಬಾರ್ದು. ನಮ್ಮ ಪರಿಷತ್ ಅಧ್ಯಕ್ಷರನ್ನ ನೋಡಿಯಾದ್ರು ಸ್ವಲ್ಪ ಶಿಸ್ತು ಕಲೀರಿ...’

‘ಯಾರು ವಿಧಾನ ಪರಿಷತ್ ಅಧ್ಯಕ್ಷರಾ?’

‘ಅಲ್ಲ, ನಮ್ಮ ಸಾಹಿತ್ಯ ಪರಿಷತ್ ಅಧ್ಯಕ್ಷರು. ಅವರ ಸಭೆ ನೋಡಿದೀರಾ? ಯಾರೂ
ಪಿಟಿಕ್ಕನ್ನಂಗಿಲ್ಲ, ಏರು ಧ್ವನೀಲಿ ಮಾತಾಡಂಗಿಲ್ಲ, ಎಲ್ಲದಕ್ಕೂ ಕೈ ಎತ್ತಿ ಪರ್ಮಿಶನ್ ತಗಾಬೇಕು. ರೂಲ್ಸು ಅಂದ್ರೆ ರೂಲ್ಸು’.

‘ಓ ಅದಾ.‌.. ಅದೆಲ್ಲ ಹಳೆ ರೂಲ್ಸು ಬಿಡಲೆ, ನಮ್ ತೆಪರೇಸಿ ಮನೇಲಿ ಜಾರಿಗೆ ಬಂದು ಬಾಳ ವರ್ಷಾದುವು’ ಗುಡ್ಡೆ ನಕ್ಕ.

‘ಅಂದ್ರೆ?’

‘ನಮ್ ತೆಪರೇಸಿ ಮನೇಲೂ ಅಷ್ಟೆ, ಹೆಂಡ್ತಿ ಮುಂದೆ ತೆಪರ ಪಿಟಿಕ್ಕನ್ನಂಗಿಲ್ಲ. ಎಲ್ಲದಕ್ಕೂ ಪರ್ಮಿಶನ್ ತಗಾಬೇಕು. ಏರು ಧ್ವನೀಲಿ ಮಾತಾಡಿದ್ರೆ ಅವತ್ತು ಚಾಪಿ ದಿಂಬು ಹೊರಕ್ಕೇ’.

ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.