ADVERTISEMENT

ಚುರುಮುರಿ| ಮಳೆ ಮತ್ತು ಮೊಳೆ

ಬಿ.ಎನ್.ಮಲ್ಲೇಶ್
Published 11 ಫೆಬ್ರುವರಿ 2021, 19:30 IST
Last Updated 11 ಫೆಬ್ರುವರಿ 2021, 19:30 IST
Churumuri-12-02-2021
Churumuri-12-02-2021   

‘ರೀ ತೆಪರೇಸಿ, ಮಳೆಗೂ ಮೊಳೆಗೂ ಏನ್ರಿ ವ್ಯತ್ಯಾಸ?’ ವರದಿಗಾರ ತೆಪರೇಸಿಯನ್ನು ಸಂಪಾದಕರು ಪ್ರಶ್ನಿಸಿದರು.

‘ಸರ್, ಮಳೆ ತಾನೇ ರಪ ರಪ ಹೊಡೀತತಿ, ಮೊಳೇನ ನಾವೇ ಹೊಡೀಬೇಕು...’

‘ಸರಿ, ಆಮೇಲೆ?’

ADVERTISEMENT

‘ಮಳೆಗೆ ಆಕಾಶ ನೋಡಬೇಕು, ಮೊಳೆಗೆ ನೆಲ ನೋಡ್ಕಂಡು ನಡೀಬೇಕು’.

‘ಒಳ್ಳೆ ಉತ್ತರ, ಮತ್ತೆ?’

‘ಮಳೆ ಹರಿಯುತ್ತೆ, ಮೊಳೆ ತಡೆದು ನಿಲ್ಸುತ್ತೆ’.

‘ಗೊತ್ತಾತು, ಮುಂದೆ?’

‘ಮಳೆ ಯಾರ ಮಾತನ್ನೂ ಕೇಳಲ್ಲ. ಮೊಳೆ ಸರ್ಕಾರದ ಮಾತು ಕೇಳುತ್ತೆ...’

‘ಅರ್ಥ ಆತು, ಪಾಯಿಂಟ್‍ಗೆ ಬರ್ತಾ ಇದೀರ...’

‘ಮಳೆ ಬಂದ್ರೆ, ಮಗ ಉಂಡ್ರೆ ಕೇಡಲ್ಲ... ಎಲ್ಲಿ ಬೇಕಲ್ಲಿ ಮೊಳೆ ಹೊಡೆದ್ರೆ ಕೇಡು...’

‘ಇದು ವ್ಯತ್ಯಾಸ ಅಲ್ಲ ಅನ್ಸುತ್ತೆ...’

‘ಮಳೆ ಬಂದ್ರೆ ಬೆಳೆ ಬರುತ್ತೆ, ಮೊಳೆ ಬಂದ್ರೆ ಆಪರೇಷನ್ ಮಾಡಿಸ್ಕಾಬೇಕಾಗುತ್ತೆ...’

‘ಆಪರೇಷನ್ನಾ?’

‘ಹ್ಞೂಂ ಸಾ, ಆಸನದಲ್ಲಿ ಮೊಳೆ ಬಂದ್ರೆ... ಅರ್ಥ ಆಗಲಿಲ್ವ?’

‘ಆತು ಬಿಡಪ್ಪ, ಎಲ್ಲಿಂದ ಎಲ್ಲಿಗೋ ಹೋದೆಯಲ್ಲಯ್ಯ. ನಿನ್ನ ಪಾದ ಜೆರಾಕ್ಸ್ ಮಾಡಿಕೊಡು, ಜೇಬಲ್ಲಿಟ್ಕಂಡು ದಿನಾ ನಮಸ್ಕಾರ ಮಾಡ್ತೀನಿ...’

‘ನನ್ನ ಪಾದ ಈಗ ಜೆರಾಕ್ಸ್ ಆಗಲ್ಲ ಸಾ...’

‘ಯಾಕೆ?’

‘ಎರಡು ಪಾದಯಾತ್ರೇಲಿ ನಡೆದೂ ನಡೆದೂ ಸವೆದು ಹೋಗಿದಾವೆ ಸಾ... ಒಂದು ವಾರ ರಜೆ ಕೊಡಿ’.

ಸಂಪಾದಕರು ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.