ADVERTISEMENT

ಚುರುಮುರಿ: ಬೈ ಬೈ ದುಬೈ!

ತುರುವೇಕೆರೆ ಪ್ರಸಾದ್
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
   

‘ಪೇಪರ್ ಓದುದ್ಯೇನೇ? ಕರ್ಣಂ ಮಲ್ಲೇಶ್ವರಿ 110 ಕೆ.ಜಿ. ವೇಟ್ ಎತ್ತುದ್ರೂ ಚಿನ್ನ ಸಿಗದೆ ಕಂಚು ಸಿಕ್ಕಿತ್ತು. ಈಕೆ ಯಾರೋ ಪುಣ್ಯಾತ್ಗಿತ್ತಿ 14 ಕೆ.ಜಿ. ಚಿನ್ನನೇ ಸಲೀಸಾಗಿ ಎತ್ಕೊಂಡು ಬಂದಿದಾಳೆ’ ಎಂದ ಪರ್ಮೇಶಿ.

‘ಅಯ್ಯೋ ಅಂತಾದ್ದೆಲ್ಲಾ ಓದಬಾರದು. ಆ ವೈಭವಾನ ಟೀವೀಲಿ ನೋಡಿ ಕಣ್ತುಂಬ್ಕೊಬೇಕು. ಜೀವನವೆಲ್ಲಾ ನಿಮ್ಮನ್ನ ಹಿಂಡುದ್ರೂ ಕಾಲು ಕೆ.ಜಿ. ಚಿನ್ನನೂ ಉದುರ್ಲಿಲ್ವಲ್ಲ’ ಅಂದರು ಪದ್ದಮ್ಮ.

‘ಅದು ಸ್ಮಗಲ್ಡ್ ಕಣೆ. ನೀನೆಂದೂ ದುಬಾಯಿ ಚಿನ್ನ ಬೇಕು ಅಂದೋಳಲ್ಲ, ಆ ಮಟ್ಟಿಗೆ ನೀನು ರನ್ಯಾ ಅಲ್ಲ ಅನನ್ಯ, ಅಪ್ಪಟ ಸವರನ್’.

ADVERTISEMENT

‘ಹೀಗೆ ರೈಲು ಹತ್ಸಿದ್ದೇ ಆಯ್ತು ಬಿಡಿ. ಒಂದು ಚಿನ್ನದ ಲಾಕೆಟ್ ಮಾಡಿಸ್ಕೊಡ್ಲಿಲ್ಲ ನೀವು’.

‘ಅಷ್ಟೊಂದು ದುಡ್ಡು ಎಲ್ಲಿದೆಯೇ? ಹೆಂಡ್ತಿಗೆ ಲಾಕೆಟ್ ಮಾಡ್ಸಕ್ಕೆ ಅಂತ ಸ್ಮಗ್ಲಿಂಗ್ ರಾಕೆಟ್ ನಡ್ಸಕ್ಕಾಗುತ್ತಾ? ನೀನೇ ಚಿನ್ನ ಕಣೆ, ನಿನಗೆಂತ ಚಿನ್ನ?’

‘ಎಲ್ಲ ಗಂಡಸರೂ ಹೀಗೇ ಹೇಳಿ ಹೇಳಿ ಒನ್ ಗ್ರಾಂ ತಗಡಿಗೇ ಹೆಂಗಸರು ಲಾಯಕ್ ಅನ್ನೋ ಹಾಗಾಗಿದೆ. ನನ್ ಯೋಗ್ಯತೆಗೆ ಒಂದೆರಡು ಬಿಸ್ಕತ್ತಾದ್ರೂ ಬೇಡ್ವಾ?’

‘ಈಗ ಬಿಸ್ಕತ್ ತರ ಹಾಕ್ತಿರೋ ಸಂಬಳದಲ್ಲಿ ಅದೆಲ್ಲಾ ಎಲ್ ಸಾಧ್ಯ? ನಮ್ಮನೆ ನಾಯಿ ಬಿಸ್ಕತ್ತಿಗೇ ಕಾಸಿರಲ್ಲ’.

‘ಈ ತರ ಓಳುಬಿಡೋ ಬದ್ಲು ನೀವೂ ದುಬೈಗೆ ಹೋಗಿ ಚಿನ್ನ ತರ್ಬೇಕು. ಅಲ್ಲಿ ಚಿನ್ನ ಅಗ್ಗ ಅಂತಲ್ಲ’.

‘ಆಂ! ನಾನೂ ಗೋಲ್ಡ್ ಸ್ಮಗ್ಲಿಂಗ್ ಮಾಡ್ಬೇಕಾ?’

‘ಸ್ಮಗ್ಲಿಂಗ್ ಅಲ್ಲ, ಅಲ್ಲೇ ಹೋಗ್ ಕೆಲಸ ಮಾಡಿ! ಚಿನ್ನ ಎಲ್ ಹಾಕ್ಕಂಡ್ರೇನು? ನನ್ನನ್ನೇ ಅಲ್ಲಿಗೆ ಕರುಸ್ಕೊಂಡ್ರಾಯ್ತು!’

‘ಅಯ್ಯೋ, ನಿನ್ ತಲೆ. ಇಲ್ಲಿ ತರ ಅಲ್ಲಿ ಬೇಕಾಬಿಟ್ಟಿ ಇರಕ್ಕಾಗಲ್ಲ ಕಣೆ. ಸಾಲ ಮಾಡಿ ವಾಪಸ್ ಮಾಡದೋರನ್ನ ಸಾಲಗಾರರ ಜೈಲಿಗೆ ಹಾಕ್ಬಹುದು, ಚೆಕ್ ಬೌನ್ಸ್ ಆದ್ರೂ ವರ್ಷಗಟ್ಟಲೆ ಅಲೆದಾಡ್ಸಕ್ಕಾಗಲ್ಲ, ಅಲ್ಲಿ ಸುಖಾಸುಮ್ಮನೆ ಚಳವಳಿ ಮಾಡಕ್ಕಾಗಲ್ಲ. ಇಲ್ಲೂ ಸಲೀಸಾಗಿ ಚಿನ್ನ ಮಾಡ್ಬಹುದಲ್ಲ, ಲೋಕಾಯುಕ್ತದೋರು ಒಂದೊಂದು ದಾಳಿಲೂ ಮೂರ್ನಾಲ್ಕು ಕೋಟಿ ರೂಪಾಯಿ ಬೆಲೆಯ ಚಿನ್ನ ಪತ್ತೆ ಮಾಡಲ್ವಾ? ಇಂಡಿಯಾನೇ ಸೈ! ಬೈ ಬೈ ದುಬೈ’ ಎಂದು ಪಂಚೆ ಕೊಡವಿಕೊಂಡು ಎದ್ದು ಹೋದ ಪರ್ಮೇಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.